Chaitra Kundapur, Halashri Swamiji
Chaitra Kundapur, Halashri Swamiji  
ಸುದ್ದಿಗಳು

ಚೈತ್ರಾ ವಂಚನೆ ಪ್ರಕರಣ: ಹಾಲಶ್ರೀ ಜಾಮೀನು ಆದೇಶವನ್ನು ಅ.16ಕ್ಕೆ ಕಾಯ್ದಿರಿಸಿದ ಬೆಂಗಳೂರಿನ ಸತ್ರ ನ್ಯಾಯಾಲಯ

Siddesh M S

ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ಆದೇಶವನ್ನು ಅಕ್ಟೋಬರ್‌ 16ಕ್ಕೆ ಪ್ರಕಟಿಸುವುದಾಗಿ ಬೆಂಗಳೂರಿನ ನ್ಯಾಯಾಲಯವು ಹೇಳಿದೆ.

ಹಾಲಶ್ರೀ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯ ವಾದ-ಪ್ರತಿವಾದ ಆಲಿಸಿದ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಟಿ ಗೋವಿಂದಯ್ಯ ಅವರು ಬುಧವಾರ ಆದೇಶ ಕಾಯ್ದಿರಿಸಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು “ತಡವಾಗಿ ಪ್ರಕರಣವಾಗಿ ದಾಖಲಿಸಲಾಗಿದೆ. ಅಲ್ಲದೇ, ಬಹುತೇಕ ಎಲ್ಲಾ ಹಣವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರ್ಜಿದಾರರ ವಿರುದ್ಧ ದಾಖಲಿಸಿರುವ ಸೆಕ್ಷನ್‌ಗಳು ಇಲ್ಲಿ ಅನ್ವಯಿಸುವುದಿಲ್ಲ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಸರ್ಕಾರಿ ಅಭಿಯೋಜಕಿ ವೀಣಾ ಅವರು “ಅರ್ಜಿದಾರರ ವಿಚಾರಣೆ ನಡೆಯುತ್ತಿದೆ. ಇನ್ನಷ್ಟೇ ಆರೋಪಪಟ್ಟಿ ಸಲ್ಲಿಕೆಯಾಗಬೇಕಿದೆ. ಅರ್ಜಿದಾರರು ಸ್ವಾಮೀಜಿಯಾಗಿದ್ದು, ಇಂಥ ಪ್ರಕರಣದಲ್ಲಿ ಸಿಲುಕಿರುವುದರಿಂದ ಜಾಮೀನು ನೀಡಿದಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಲಿದೆ” ಎಂದು ಆಕ್ಷೇಪಿಸಿದರು. ದೂರುದಾರ ಉದ್ಯಮಿ ಗೋವಿಂದ ಪೂಜಾರಿ ಅವರ ಪರವಾಗಿ ಹಿರಿಯ ವಕೀಲ ಎಚ್‌ ಎಸ್‌ ಚಂದ್ರಮೌಳಿ ಅವರು ವಾದಿಸಿದರು.

ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಅವರಿಂದ ಐದು ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣದ ಆರೋಪಿಗಳಾದ ಹಿಂದೂ ಕಾರ್ಯಕರ್ತೆ ಚೈತ್ರಾ, ಶ್ರೀಕಾಂತ್‌, ರಮೇಶ್‌, ಗಗನ್‌, ಪ್ರಜ್ವಲ್‌ ಹಾಗೂ ಧನರಾಜ್‌ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಇತ್ತ ಪ್ರಕರಣದ ಮೂರನೇ ಆರೋಪಿ, ದೂರುದಾರರಿಂದ ರೂ.1.50 ಕೋಟಿ ಹಣ ಪಡೆದ ಆರೋಪ ಎದುರಿಸುತ್ತಿರುವ ಸ್ವಾಮೀಜಿಯನ್ನು ಸೆಪ್ಟೆಂಬರ್‌ 19ರಂದು ಸಿಸಿಬಿ ಪೊಲೀಸರು ಒಡಿಶಾದ ಕಟಕ್‌ನಲ್ಲಿ ಬಂಧಿಸಿದ್ದರು. ಇದಕ್ಕೂ ಮುನ್ನ, ಹಾಲಶ್ರೀ ಸ್ವಾಮೀಜಿ ಅವರು ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನು ಕೋರಿದ್ದನ್ನು ಇಲ್ಲಿ ನೆನೆಯಬಹುದು.