ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ
ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ 
ಸುದ್ದಿಗಳು

ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಕಾಯಿದೆ ಪ್ರಶ್ನಿಸಿರುವ ಅರ್ಜಿ: ಮಾ.15ರಂದು ವಿಚಾರಣೆ ನಡೆಸಲಿರುವ ಸುಪ್ರೀಂ

Bar & Bench

ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿಡುವ ಕಾಯಿದೆ ಪ್ರಶ್ನಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 15, ಶುಕ್ರವಾರ ವಿಚಾರಣೆ ನಡೆಸಲಿದೆ.

ಪ್ರಕರಣದ ಅರ್ಜಿದಾರರಲ್ಲಿ ಒಂದಾದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸರ್ಕಾರೇತರ ಸಂಸ್ಥೆ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದೆದುರು ಇಂದು ಪ್ರಕರಣ ಉಲ್ಲೇಖಿಸಿದರು.

ಸಿಜೆಐ ಡಿ.ವೈ.ಚಂದ್ರಚೂಡ್ ಅವರ ಸೂಚನೆ ಹಿನ್ನೆಲೆಯಲ್ಲಿ ಇದೇ ಶುಕ್ರವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಎಂಎಂ ಸುಂದರೇಶ್ ಹಾಗೂ ಬೇಲಾ ತ್ರಿವೇದಿ

ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಿಂದ ಸಿಜೆಐ ಅವರನ್ನು ಕೈಬಿಟ್ಟಿದ್ದಕ್ಕಾಗಿ ವಿವಾದಕ್ಕೀಡಾಗಿರುವ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮಾವಳಿ ಹಾಗೂ ಅಧಿಕಾರಾವಧಿ) ಕಾಯಿದೆ- 2023ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇನ್ನಷ್ಟೇ ಇತ್ಯರ್ಥಪಡಿಸಬೇಕಿದೆ.

ಪ್ರಧಾನಿ (ಪ್ರಧಾನಿ), ಕೇಂದ್ರ ಸಂಪುಟ ಸಚಿವರು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಆಯ್ಕೆ ಸಮಿತಿ ಸಿಇಸಿ ಮತ್ತು ಚುನಾವಣಾ ಆಯುಕ್ತರನ್ನು ನೇಮಕ ಮಾಡಲು ಅವಕಾಶ ನೀಡುವ ಹೊಸ ಕಾಯಿದೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಈಗಾಗಲೇ ಎರಡು ಬಾರಿ ನಿರಾಕರಿಸಿದೆ.

ಹೊಸ ಆಯ್ಕೆ ಸಮಿತಿಯಲ್ಲಿ ಆಡಳಿತಾರೂಢ ಸರ್ಕಾರವು ಪ್ರಾಬಲ್ಯ ಸಾಧಿಸುತ್ತದೆ ಎಂಬ ಆತಂಕದ ಮೇಲೆ ಕಾಂಗ್ರೆಸ್‌ ನಾಯಕಿ ಡಾ.ಜಯಾ ಠಾಕೂರ್ ಅವರು ಕಾಯಿದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಆಯ್ಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇರಬೇಕು ಎಂದು ತಿಳಿಸುವ ಅನೂಪ್‌ ಬರನ್ವಾಲ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪನ್ನು ಕಾಯಿದೆ ಉಲ್ಲಂಘಿಸಿದೆ ಎಂದು ಜಯಾ ಆರೋಪಿಸಿದ್ದರು.

ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಭಾರತದ ಚುನಾವಣಾ ಆಯೋಗದ (ಇಸಿಐ) ಪ್ರತಿಕ್ರಿಯೆಗಳನ್ನು ಕೋರಿತ್ತು. ಠಾಕೂರ್ ಅವರ ಮನವಿಯ ಜೊತೆಗೆ ಎಡಿಆರ್ ಮನವಿಯನ್ನು ಕೂಡ ಇದೇ ಸಂದರ್ಭದಲ್ಲಿ ಆಲಿಸಲಾಗುತ್ತದೆ.