ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತರಾಗಿ ಅಶಿತ್ ಮೋಹನ್ ಪ್ರಸಾದ್ ಹಾಗೂ ರಾಜ್ಯ ಮಾಹಿತಿ ಆಯುಕ್ತರಾಗಿ ಕೆ ರಾಮನ್, ಡಾ.ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ.ಚನ್ನಾಳ, ಎಸ್.ರಾಜಶೇಖರ, ಕೆ ಬದ್ರುದ್ದೀನ್ ಮತ್ತು ಬಿ ಆರ್ ಮಮತಾ ನೇಮಕಾತಿ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಹುದ್ದೆಯ ಆಕಾಂಕ್ಷಿ ಜೆ ಪಿ ನಗರ 7ನೇ ಹಂತದ ನಿವಾಸಿಯಾದ ಸಾಮಾಜಿಕ ಕಾರ್ಯಕರ್ತ ಕೆ ಮಲ್ಲಿಕಾರ್ಜುನ ರಾಜು ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠದಲ್ಲಿ ಮಂಗಳವಾರ (ಫೆ.04) ವಿಚಾರಣೆಗೆ ನಿಗದಿಯಾಗಿದೆ.
ಮಂಗಳವಾರವೇ (ಫೆ.04) ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಿಗದಿಯಾಗಿದ್ದು, ಅಷ್ಟರೊಳಗೆ ಈ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು. ಇಲ್ಲವಾದಲ್ಲಿ ಅರ್ಜಿ ನಿಷ್ಪ್ರಯೋಜಕವಾಗುತ್ತದೆ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.