PM Narendra Swamy & Karnataka HC 
ಸುದ್ದಿಗಳು

ಕೆಎಸ್‌ಪಿಸಿಬಿ ಅಧ್ಯಕ್ಷರಾಗಿ ಶಾಸಕ ನರೇಂದ್ರ ಸ್ವಾಮಿ ನೇಮಕಕ್ಕೆ ಆಕ್ಷೇಪ: ಸರ್ಕಾರ, ಆಯ್ಕೆ ಸಮಿತಿಗೆ ಹೈಕೋರ್ಟ್ ನೋಟಿಸ್

ರಾಜಕಾರಣಿಯಾದ ನರೇಂದ್ರ ಸ್ವಾಮಿ ಅವರು ಹಾಲಿ ವಿಧಾನ ಸಭಾ ಸದಸ್ಯರಾಗಿದ್ದು, ಜಲ ಕಾಯಿದೆ ಸೆಕ್ಷನ್‌ 4(2) ಮತ್ತು ವಾಯು ಕಾಯಿದೆ ಸೆಕ್ಷನ್‌ 5(2)(a) ರಲ್ಲಿ ಹೇಳಿರುವಂತೆ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಜ್ಞಾನ ಹೊಂದಿಲ್ಲ ಎಂಬುದು ಆಕ್ಷೇಪ.

Bar & Bench

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರನ್ನಾಗಿ ಮಳವಳ್ಳಿ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಚಿಕ್ಕಬಳ್ಳಾಪುರದ ಆರ್‌ ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲ ಎಕ್ಸ್‌ ಎಂ ಜೋಸೆಫ್‌ ಮತ್ತು ಕೆಎಸ್‌ಪಿಸಿಬಿ ಪ್ರತಿನಿಧಿಸಿದ್ದ ವಕೀಲ ಮಹೇಶ್‌ ಚೌಧರಿ ವಾದ ಆಲಿಸಿದ ಪೀಠವು ಸರ್ಕಾರ, ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯ್ಕೆ ಸಮಿತಿ, ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಡಿಪಿಎಆರ್‌ ಕಾರ್ಯದರ್ಶಿ ಜಿ ಸತ್ಯವತಿ, ಮಂಗಳೂರಿನ ಅದ್ಯಾರ್‌ನಲ್ಲಿರುವ ಸಹ್ಯಾದ್ರಿ ಇಂಜಿಯರಿಂಗ್‌ ಕಾಲೇಜಿನ ಸಂಶೋಧನಾ ಕನ್ಸಲ್ಟೆನ್ಸಿಯ ನಿರ್ದೇಶಕ ಡಾ. ಮಂಜಪ್ಪ, ಆಯ್ಕೆ ಸಮಿತಿ ಕಾರ್ಯದರ್ಶಿ ಅಂಜುಮ್‌ ಪರ್ವೇಜ್‌ಗೆ ನೋಟಿಸ್‌ ಜಾರಿ ಮಾಡಿತು.

ಅಲ್ಲದೇ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕಾತಿ ಮತ್ತು ಸೇವಾ ಷರತ್ತು ನಿಯಮಗಳನ್ನು ಪ್ರಶ್ನಿಸಿರುವ ಅರ್ಜಿಯೊಂದಿಗೆ ಹಾಲಿ ಅರ್ಜಿ ಪಟ್ಟಿ ಮಾಡುವಂತೆ ನ್ಯಾಯಾಲಯವು ರಿಜಿಸ್ಟ್ರಿಗೆ ನಿರ್ದೇಶಿಸಿತು.

ರಾಜಕಾರಣಿಯಾಗಿರುವ ಪಿ ಎಂ ನರೇಂದ್ರ ಸ್ವಾಮಿ ಅವರು ಹಾಲಿ ವಿಧಾನ ಸಭಾ ಸದಸ್ಯರಾಗಿದ್ದು, ಜಲ ಕಾಯಿದೆ ಸೆಕ್ಷನ್‌ 4(2) ಮತ್ತು ವಾಯು ಕಾಯಿದೆ ಸೆಕ್ಷನ್‌ 5(2)(a) ರಲ್ಲಿ ಹೇಳಿರುವಂತೆ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಜ್ಞಾನ ಹೊಂದಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ, ಡಿಪಿಎಆರ್‌ ಕಾರ್ಯದರ್ಶಿ ಜಿ ಸತ್ಯವತಿ, ಮಂಗಳೂರಿನ ಅದ್ಯಾರ್‌ನಲ್ಲಿರುವ ಸಹ್ಯಾದ್ರಿ ಇಂಜಿಯರಿಂಗ್‌ ಕಾಲೇಜಿನ ಸಂಶೋಧನಾ ಕನ್ಸಲ್ಟೆನ್ಸಿಯ ನಿರ್ದೇಶಕ ಡಾ. ಮಂಜಪ್ಪ, ಅಂಜುಮ್‌ ಪರ್ವೇಜ್‌ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಕಾಯಿದೆಗೆ ವಿರುದ್ಧವಾಗಿ ನರೇಂದ್ರ ಸ್ವಾಮಿ ಅವರ ಹೆಸರನ್ನು ಕೆಎಸ್‌ಪಿಸಿಬಿ ಅಧ್ಯಕ್ಷ ಹುದ್ದೆಗೆ ಶಿಫಾರಸ್ಸು ಮಾಡಿದೆ. ಸಭೆಗೆ ಭಾರತ ಸರ್ಕಾರದ ಪರಿಸರ ಇಲಾಖೆಯ ಕಾರ್ಯದರ್ಶಿ ಗೈರಾಗಿದ್ದರು ಎಂದು ಆಕ್ಷೇಪಿಸಲಾಗಿದೆ. ಆಯ್ಕೆ ಸಮಿತಿಯ ಶಿಫಾರಸ್ಸು ಆಧರಿಸಿ ಫೆಬ್ರವರಿ 5ರಂದು ನರೇಂದ್ರ ಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಇದನ್ನು ರದ್ದುಪಡಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ.