“ಚುನಾವಣೆಗಳಲ್ಲಿ ಜಾತಿ ಮತ್ತು ಶಿಕ್ಷಣ ಪ್ರಮಾಣ ಪತ್ರಗಳ ಕುರಿತು ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಭಾರತೀಯ ಕಾನೂನು ಆಯೋಗ ಗಮನ ಹರಿಸಬೇಕಾದ ಅಗತ್ಯವಿದೆ” ಎಂದಿರುವ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಜಾತಿ ಪ್ರಮಾಣ ಪತ್ರ ವಿವಾದಕ್ಕೆ ಸಂಬಂಧಿಸಿದಂತೆ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ವಜಾಗೊಳಿಸಿದೆ.
ಸಮಾಜ ಕಲ್ಯಾಣ ಇಲಾಖೆಯ ಮೇಲ್ಮನವಿ ಆಯುಕ್ತರು 2023ರ ನವೆಂಬರ್ 22ರಂದು ನೀಡಿರುವ ನೋಟಿಸ್ ರದ್ದುಪಡಿಸಬೇಕು ಎಂದು ಕೋರಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
“ಚವ್ಹಾಣ್ ತಾವು ಕರ್ನಾಟಕದಲ್ಲಿ ಜನಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ಅಂಶವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯೇ ನಿರ್ಧರಿಸಬೇಕು. ಈ ವಿವಾದವನ್ನು ನ್ಯಾಯಾಲಯಗಳು ನಿರ್ಣಯಿಸಿ ತೀರ್ಮಾನ ಕೈಗೊಳ್ಳಲು ಅವಕಾಶವಿಲ್ಲ” ಎಂದು ತಿಳಿಸಿದೆ.
“ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ದಾಖಲಾಗಿರುವ ಸಿವಿಲ್ ನ್ಯಾಯಾಲಯದಲ್ಲಿನ ಪ್ರಕರಣಗಳು, ಅರೆ ನ್ಯಾಯಿಕ ಹಾಗೂ ಆಡಳಿತಾತ್ಮಕ ಪ್ರಾಧಿಕಾರಗಳಲ್ಲಿ ಬಾಕಿಯಿರುವ ಪ್ರಕರಣಗಳು, ಜಾತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಪ್ರಶ್ನಿಸಲಾಗಿರುವುದೂ ಸೇರಿದಂತೆ ಎಲ್ಲಾ ಅಂಶಗಳನ್ನು ಘೋಷಣೆ ಮಾಡುವುದು ಅಗತ್ಯ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಸಿ.ಜಗದೀಶ್ ಅವರು “ಚವ್ಹಾಣ್ ಮಹಾರಾಷ್ಟ್ರದಲ್ಲಿ ಜನಿಸಿದ್ದವರಾಗಿದ್ದಾರೆ. ಹೀಗಾಗಿ, ಅವರು ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗುವುದಿಲ್ಲ” ಎಂದು ವಾದಿಸಿದ್ದರು.
ಹಿರಿಯ ವಕೀಲ ಅಮಿತ್ ಕುಮಾರ್ ದೇಶಪಾಂಡೆ ಅವರು “ಅರ್ಜಿದಾರರು ಪರಿಶಿಷ್ಟ ಜಾತಿಯ ಲಂಬಾಣಿ ಸಮುದಾಯಕ್ಕೆ ಸೇರಿದ್ದು, ಅವರ ಜಾತಿ ಪ್ರಮಾಣ ಪತ್ರವನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಈಗಾಗಲೇ ಹಲವು ಬಾರಿ ತಿರಸ್ಕರಿಸಲಾಗಿದೆ. ಆದ್ದರಿಂದ, ಈ ಅರ್ಜಿಯನ್ನೂ ವಜಾ ಮಾಡಬೇಕು” ಎಂದು ಮನವಿ ಮಾಡಿದ್ದರು.
ಪ್ರಕರಣದ ಹಿನ್ನೆಲೆ: ಪ್ರಭು ಚವ್ಹಾಣ್ ಜಾತಿ ಪ್ರಮಾಣ ಪತ್ರದ ಸಿಂಧುತ್ವ ಪ್ರಶ್ನಿಸಿ ಔರಾದ ಕ್ಷೇತ್ರದ ಪರಾಜಿತ ಅಭ್ಯರ್ಥಿ ನರಸಿಂಗ ಅವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ್ದ ಬೀದರ್ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಪ್ರಭು ಚವ್ಹಾಣ್ ಅವರ ಜಾತಿ ಸಿಂಧುತ್ವವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ನರಸಿಂಗ ಅವರು ರಾಜ್ಯ ಸಮಾಜ ಕಲ್ಯಾಣ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತಂತೆ ಮೇಲ್ಮನವಿ ಸಮಿತಿ ಚವ್ಹಾಣ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು.