ರಾಜ್ಯ ವಕ್ಫ್ ಮಂಡಳಿಗೆ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಮತ್ತು ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಸೇರಿ ಐವರ ನೇಮಕಾತಿ ರದ್ದುಪಡಿಸಲು ಎಂದು ಸಲ್ಲಿಸಿರುವ ಅರ್ಜಿಗೆ ಎರಡು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಯಾದಗಿರಿ ಜಿಲ್ಲೆಯ ಸಯ್ಯದ್ ಖುಸ್ರೊ ವಾಲಿವುಲ್ಲಾ ಹುಸೈನಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠವು ನಡೆಸಿತು.
ರಾಜ್ಯ ಸರ್ಕಾರದ ಪರ ವಕೀಲರ ಕೋರಿಕೆಯ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಿದ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿತು. ಜನವರಿ 10ರಂದು ರಾಜ್ಯ ಸರ್ಕಾರ, ವಕ್ಫ್ ಮಂಡಳಿ, ಚುನಾವಣಾಧಿಕಾರಿ ಹಾಗೂ ಐವರು ಖಾಸಗಿ ಪ್ರತಿವಾದಿಗಳಿಗೆ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿತ್ತು.
ಅರ್ಜಿದಾರರ ಪರ ವಕೀಲರು "ಹಾಲಿ ಸದಸ್ಯರು ಹಿಂದೆ ವಕ್ಫ್ ಮಂಡಳಿ ಸದಸ್ಯರಾಗಿದ್ದಾಗ ಸರಿಯಾಗಿ ಜವಾಬ್ದಾರಿ ನಿರ್ವಹಿಸಿಲ್ಲ. ವಕ್ಫ್ ಆಸ್ತಿಗಳ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ, ಅವರ ನೇಮಕಾತಿ ರದ್ದುಗೊಳಿಸಿ, ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು" ಎಂದು ಅರ್ಜಿದಾರರು ಕೋರಿದರು.
ಸರ್ಕಾರದ ಪರ ಹಾಗೂ ಮಂಡಳಿಯ ಸದಸ್ಯರ ಪರ ವಕೀಲರು "ಅರ್ಜಿದಾರರು ವಕ್ಫ್ ಮಂಡಳಿ ಸದಸ್ಯರಲ್ಲ. ಚುನಾವಣೆಗೂ ಅವರು ಸ್ಪರ್ಧಿಸಿರಲಿಲ್ಲ. ಅರ್ಜಿ ಸಲ್ಲಿಸುವ ಅರ್ಹತೆ ಅವರಿಗಿಲ್ಲ. ಈಗಾಗಲೇ ವಕ್ಫ್ ಮಂಡಳಿ ಸದಸ್ಯರ ಚುನಾವಣೆ ನಡೆದಿದೆ. ಫೆಬ್ರವರಿ 17ಕ್ಕೆ ವಕ್ಫ್ ಮಂಡಳಿ ಅಧ್ಯಕ್ಷರ ಚುನಾವಣೆ ನಿಗದಿಯಾಗಿದೆ. ಅರ್ಜಿಯು ವಿಚಾರಣಾ ಮಾನ್ಯತೆ ಹೊಂದಿಲ್ಲ. ಹೀಗಾಗಿ, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬಾರದು. ಅರ್ಜಿದಾರರು ಕೋರಿರುವ ಮನವಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು" ಎಂದರು.
ವಕ್ಫ್ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿರುವ ಡಾ. ಸಯ್ಯದ್ ನಾಸೀರ್ ಹುಸೇನ್, ಕನೀಜ್ ಫಾತಿಮಾ, ಆರ್ ಅಬ್ದುಲ್ ರಿಯಾಜ್ ಖಾನ್, ಆಸೀಫ್ ಅಲಿ ಶೇಖ್ ಹುಸೇನ್ ಮತ್ತು ಕೆ ಅನ್ವರ್ ಬಾಷಾ ಅವರ ನೇಮಕಾತಿಯು ಅಕ್ರಮವಾಗಿದೆ. ಹೀಗಾಗಿ, ನೇಮಕಾತಿ ಆದೇಶ ವಜಾ ಮಾಡಬೇಕು. ವಕ್ಫ್ ಕಾಯಿದೆ ಮತ್ತು ನಿಯಮಗಳಿಗೆ ಅನುಗುಣವಾಗಿ ಹೊಸದಾಗಿ ವಕ್ಫ್ ಮಂಡಳಿಗೆ ಸದಸ್ಯರನ್ನು ನೇಮಕ ಮಾಡಲು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿಯಾಗಿದ್ದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.