ಸುದ್ದಿಗಳು

ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ ಸಿಂಧುತ್ವ ಪ್ರಶ್ನೆ: ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ ಹೈಕೋರ್ಟ್‌

ಅರ್ಜಿದಾರರು ತಮ್ಮ ಲಿಖಿತ ವಾದಾಂಶ ದಾಖಲಿಸಬೇಕು. ಅದಕ್ಕೆ ಸರ್ಕಾರವು ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್‌ 11ಕ್ಕೆ ಮುಂದೂಡಿದ ನ್ಯಾಯಾಲಯ.

Bar & Bench

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು(ಬಿಬಿಎಂಪಿ) ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನಾಗಿ (ಜಿಬಿಎ) ರಚನೆ ಮಾಡಿರುವ ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಮಾರ್ಚ್ 11ರಂದು ವಿಚಾರಣೆ ನಡೆಸುವುದಾಗಿ ಕರ್ನಾಟಕ ಹೈಕೋರ್ಟ್‌ ತಿಳಿಸಿದೆ.

2025ರ ಮೇ 15ರಂದು ರಾಜ್ಯ ಸರ್ಕಾರ ಹೊರಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಪ್ರಶ್ನಿಸಿ ಚಿತ್ರ ನಿರ್ದೇಶಕ ಟಿ ಎಸ್ ನಾಗಾಭರಣ, ನಟ ಪ್ರಕಾಶ್ ಬೆಳವಾಡಿ, ಸಿಟಿಜನ್ ಆಕ್ಷನ್ ಫೋರಂ ಮತ್ತು ಕಾತ್ಯಾಯಿನಿ ಚಾಮರಾಜ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ನಡೆಸಿತು.

ಎಲ್ಲ ಅರ್ಜಿಗಳ ಸಂಬಂಧ ಅರ್ಜಿದಾರರು ತಮ್ಮ ಲಿಖಿತ ವಾದಾಂಶ ದಾಖಲಿಸಬೇಕು. ಅದಕ್ಕೆ ಸರ್ಕಾರವು ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್‌ 11ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು “ಈ ಕಾಯಿದೆಯ ಪ್ರಕಾರ ಬೆಂಗಳೂರಿನ ಐದು ಪಾಲಿಕೆಗಳಾಗಿ ರಚನೆಯಾಗಿದೆ. ಈ ಪಾಲಿಕೆಗಳ ಮೇಲ್ವಿಚಾರಣೆಗೆ ಸಮಿತಿ ರಚನೆಯಾಗಲಿದೆ. ಈ ಸಮಿತಿಯಲ್ಲಿ ನಗರದಲ್ಲಿ ಚುನಾವಣೆಗೆ ಸ್ಪರ್ಧಿಸದೇ ಆಯ್ಕೆಯಾದವರು ಇರಲಿದ್ದು, ಜಿಬಿಎಯಲ್ಲಿ ಜಾರಿಯಾಗಬಹುದಾದಂತ ಕಾರ್ಯಯೋಜನೆಗಳ ಕುರಿತಂತೆ ನಿರ್ಣಯಗಳನ್ನು ಕೈಗೊಳ್ಳಲಿದ್ದು, ನಿರ್ದೇಶನಗಳನ್ನು ಹೊರಡಿಸಲಿದ್ದಾರೆ. ಈ ಪ್ರಕ್ರಿಯೆಯಿಂದ ಜನರಿಂದ ಆಯ್ಕೆಯಾದವರಿಗೆ ಅಧಿಕಾರ ಕಡಿತವಾಗಲಿದೆ” ಎಂದು ತಿಳಿಸಿದರು.

“ಎಲ್ಲ ಅರ್ಜಿದಾರರು ಬೆಂಗಳೂರಿನ ನಿವಾಸಿಗಳಾಗಿದ್ದು, ನಾಗರಿಕ ಸಂಘಟನೆಗಳ ಸದಸ್ಯರಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ವಿಕೇಂದ್ರೀಕರಣದ ಅನುಗುಣವಾಗಿ ನಗರ ಭಾಗಗಳಲ್ಲಿ ಸಾರ್ವಜನಿಕರು ಭಾಗಿಯಾಗುವುದು ಮುಖ್ಯವಾಗಲಿದೆ. ಆದರೆ, ಜಿಬಿಎ ಕಾಯಿದೆ ಜನರಿಂದ ಆಯ್ಕೆಯಾದವರಿಂದ ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆಗೆ ವಿರುದ್ಧವಾಗಿರಲಿದೆ” ಎಂದರು.

ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಜಿಬಿಎ ಪ್ರಶ್ನಿಸಿ ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಎರಡು ಅರ್ಜಿಗಳು ಇಡೀ ಕಾಯಿದೆಯನ್ನು ಪ್ರಶ್ನಿಸಿವೆ.  ಇನ್ನೆರಡು ಅರ್ಜಿಗಳಲ್ಲಿ ಕಾಯಿದೆಯ ಕೆಲವು ಅಂಶಗಳನ್ನು ಮಾತ್ರ ಪ್ರಶ್ನಿಸಿವೆ.  ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಅರ್ಜಿದಾರರು ಲಿಖಿತ ಹೇಳಿಕೆ ಸಲ್ಲಿಸಲಿ, ನಾವು ಲಿಖಿತ ಹೇಳಿಕೆ ಸಲ್ಲಿಸಿದ ಬಳಿಕ ದಿನಾಂಕ ನಿಗದಿ ಮಾಡಿದಲ್ಲಿ  ವಾದ ಮಂಡಿಸಲಾಗುವುದು” ಎಂದರು.