Shreyas Patel and Karnataka High Court  
ಸುದ್ದಿಗಳು

ಹಾಸನ ಸಂಸದ ಶ್ರೇಯಸ್‌ ಆಯ್ಕೆ ಪ್ರಶ್ನೆ: ಸಹಾಯಕ ಕಂದಾಯ ಅಧಿಕಾರಿಗೆ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದ ಹೈಕೋರ್ಟ್‌

ಸಹಾಯಕ ಕಂದಾಯ ಅಧಿಕಾರಿ ಜುಲೈ 8ರಂದು ವಿಚಾರಣೆಗೆ ಹಾಜರಾಗಬೇಕು.‌ 10 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಸಲ್ಲಿಸಬೇಕು ಎಂದು ಪೀಠ ತಾಕೀತು ಮಾಡಿದೆ.

Bar & Bench

ಕಳೆದ ಲೋಕಸಭಾ ಚುನಾವಣೆಯಲ್ಲಿ‌ ಹಾಸನ ಕ್ಷೇತ್ರದಿಂದ ಕಾಂಗ್ರೆಸ್‌ನ ಸಂಸದರಾಗಿರುವ ಶ್ರೇಯಸ್‌ ಪಟೇಲ್‌ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿರುವ ಅರ್ಜಿಯ ಸಾಕ್ಷ್ಯ ನುಡಿಯುವುದಕ್ಕೆ ನ್ಯಾಯಾಲಯಕ್ಕೆ ಹಾಜರಾಗದ ಕೆ ಆರ್ ಪುರ ಹೋಬಳಿಯ ದೊಡ್ಡನೆಕ್ಕುಂದಿ ಸಹಾಯಕ ಕಂದಾಯ ಅಧಿಕಾರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದೆ.

ಹಾಸನ ಸಂಸದ ಶ್ರೇಯಸ್‌ ಪಟೇಲ್‌ ಆಯ್ಕೆ ಅಸಿಂಧು ಕೋರಿ  ವಕೀಲ ದೇವರಾಜೇಗೌಡ ಅವರ  ಪುತ್ರ ಡಿ ಚರಣ್‌ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಲೋಕಸಭೆ ಚುನಾವಣೆಯಲ್ಲಿ ಸಂದರ್ಭದಲ್ಲಿ ಹಾಸನ ಕ್ಷೇತ್ರದ ಚುನಾವಣಾ ಕರ್ತವ್ಯದಲ್ಲಿದ್ದ  ಬೆಂಗಳೂರಿನ ಕೆ ಆರ್ ಪುರ ಹೋಬಳಿಯ ದೊಡ್ಡನೆಕ್ಕುಂದಿ ಹಾಲಿ ಸಹಾಯಕ ಕಂದಾಯ ಅಧಿಕಾರಿಗೆ ಸಾಕ್ಷಿ ಸಮನ್ಸ್  (ವಿಟ್ನೆಸ್ ಸಮನ್ಸ್ ) ನೀಡಲಾಗಿತ್ತು. ಅದರ ಹೊರತಾಗಿಯೂ  ಅವರು ಗೈರಾಗಿದ್ದಾರೆ. ಹಾಗಾಗಿ, ಅವರಿಗೆ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಅಲ್ಲದೇ, ಸಹಾಯಕ ಕಂದಾಯ ಅಧಿಕಾರಿ ಜುಲೈ 8ರಂದು ವಿಚಾರಣೆಗೆ ಹಾಜರಾಗಬೇಕು.‌ 10 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಸಲ್ಲಿಸಬೇಕು ಎಂದು ಪೀಠ ತಾಕೀತು ಮಾಡಿದೆ.

ಹಾಗೆಯೇ, ಇನ್ನೂ ಪ್ರಕರಣದ ಸಾಕ್ಷಿಗಳಾದ ಹಾಸನದ ಹೊಳೆನರಸೀಪುರದ ಸಬ್ ರಿಜಿಸ್ಟ್ರಾರ್, ಹೊಳೆನರಸೀಪುರ ಪುರಸಭೆಯ ಮುಖ್ಯ ಅಧಿಕಾರಿ, ಜೀ ನ್ಯೂಸ್ ಕನ್ನಡ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದೆ. ಈ ಸಾಕ್ಷಿಗಳು, 2025 ಅಕ್ಟೋಬರ್‌ 10ರ ಸಾಕ್ಷಿಗಳ ಪಟ್ಟಿಯಲ್ಲಿ ತೋರಿಸಲಾದ ದಾಖಲೆಗಳ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು  ಜುಲೈ 8ಕ್ಕೆ ಮುಂದೂಡಿದೆ.

ಶ್ರೇಯಸ್‌ ಪಟೇಲ್‌ ಅವರ ನಾಮಪತ್ರ ಕ್ರಮಬದ್ಧವಾಗಿಲ್ಲ. ಅವರು ಹಿಂದಿನ ಐದು ವರ್ಷಗಳ ಆದಾಯ ತೆರಿಗೆ ಪಾವತಿ ವಿವರ ಸಲ್ಲಿಸಿಲ್ಲ.‌ ಆ ಕುರಿತು ಪ್ರಮಾಣ ಪತ್ರದಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲ. ಚುನಾವಣಾ ವೆಚ್ಚದ ಬಗ್ಗೆಯೂ ತಪ್ಪು ಮಾಹಿತಿ ನೀಡಿದ್ದಾರೆ. ನಿಗದಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದಾರೆ. ಆ ಕುರಿತು  ಸರಿಯಾದ ಲೆಕ್ಕವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿಲ್ಲ. ಹೀಗಾಗಿ ಅವರ ಆಯ್ಕೆಯನ್ನೇ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.