ಸುದ್ದಿಗಳು

ಒಳ ಮೀಸಲಾತಿ ನಿರ್ಣಯಕ್ಕೆ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

“ಒಳ ಮೀಸಲಾತಿ ನಿರ್ಣಯದ ಅನ್ವಯ ನೇಮಕಾತಿ ಮಾಡದಂತೆ ತಡೆ ನೀಡಿರುವುದರಿಂದ ಈ ಅರ್ಜಿಯಲ್ಲಿ ಮತ್ತೊಮ್ಮೆ ಮಧ್ಯಂತರ ಆದೇಶ ಪರಿಗಣಿಸುವ ಅಗತ್ಯವಿಲ್ಲ. ಇದು ಅನಗತ್ಯವಾದ ಅರ್ಜಿಯಾಗಿದೆ” ಎಂದ ನ್ಯಾಯಾಲಯ.

Bar & Bench

ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳ ವರ್ಗೀಕರಣ ಹಾಗೂ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್ ನಾಗಮೋಹನ್ ದಾಸ್ ಆಯೋಗದ ವರದಿ ಆಧರಿಸಿ 2025ರ ಆಗಸ್ಟ್ 19ರಂದು ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡಿರುವ ನಿರ್ಣಯಕ್ಕೆ ಆಕ್ಷೇಪಿಸಿ ಬಂಜಾರ, ಭೋವಿ, ಕೊರಮ ಮತ್ತು ಕೊರಚ ಸಮುದಾಯಗಳು ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿಗೊಳಿಸಿತು.

ಬಂಜಾರ, ಭೋವಿ, ಕೊರಮ, ಕೊರಚ ಸಮಾಜ ಕಲ್ಯಾಣ ಸಂಘದ ಶಾಮರಾವ್ ಕೆ. ಪವಾರ್ ಅರ್ಜಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲರು “ಇದು ಮೀಸಲಾತಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ನ್ಯಾ. ನಾಗಮೋಹನ್‌ ದಾಸ್‌ ಅವರ ಸಮಿತಿ ವರದಿ ಆಧರಿಸಿ ಮೀಸಲಾತಿ ಹಂಚಿಕೆ ಮಾಡಿರುವುದನ್ನು ಪ್ರಶ್ನಿಸಿಲಾಗಿದೆ” ಎಂದರು.

ಇದನ್ನು ಆಲಿಸಿದ ಪೀಠವು ರಾಜ್ಯ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಮತ್ತು ಜಂಟಿ ಕಾರ್ಯದರ್ಶಿಗಳು, ಆಯುಕ್ತರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಮುಖ್ಯಸ್ಥರಿಗೆ ನೋಟಿಸ್‌ ಜಾರಿ ಮಾಡಿತು. ಅಲ್ಲದೇ, ನ್ಯಾ. ನಾಗಮೋಹನ್‌ ದಾಸ್‌ ವರದಿ ಅನುಸಾರ ಹಂಚಿಕೆ ಮಾಡಲಾಗಿರುವ ಮೀಸಲಾತಿ ಅನ್ವಯ ಹೊಸ ನೇಮಕಾತಿ ಮಾಡುವುದಕ್ಕೆ ತಡೆ ನೀಡಲಾಗಿರುವ ಅರ್ಜಿಯನ್ನೂ ಇದರ ಜೊತೆ ವಿಚಾರಣೆಗೆ ಪಟ್ಟಿ ಮಾಡುವಂತೆ ಆದೇಶಿಸಿತು.

ಆಗ ಅರ್ಜಿದಾರರ ಪರ ವಕೀಲರು “ಈ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಬೇಕು” ಎಂದು ಕೋರಿದರು. ಅದಕ್ಕೆ ಪೀಠವು “ಒಳ ಮೀಸಲಾತಿ ನಿರ್ಣಯದ ಅನ್ವಯ ನೇಮಕಾತಿ ಮಾಡದಂತೆ ತಡೆ ನೀಡಿರುವುದರಿಂದ ಈ ಅರ್ಜಿಯಲ್ಲಿ ಮತ್ತೊಮ್ಮೆ ಮಧ್ಯಂತರ ಆದೇಶ ಪರಿಗಣಿಸುವ ಅಗತ್ಯವಿಲ್ಲ. ಇದು ಅನಗತ್ಯವಾದ ಅರ್ಜಿಯಾಗಿದೆ” ಎಂದಿತು.

ನ್ಯಾ. ನಾಗಮೋಹನದಾಸ್ ಆಯೋಗ ಸಲ್ಲಿರುವ ವರದಿಯಲ್ಲಿನ ಜಾತಿವಾರು ವರ್ಗೀಕರಣವನ್ನು ಪರಿಷ್ಕರಿಸಿ 101 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ಅಂದರೆ ಗ್ರೂಪ್‌ ಎ, ಗ್ರೂಪ್‌ ಬಿ ಮತ್ತು ಗ್ರೂಪ್‌ ಸಿ ಎಂದು ವರ್ಗೀಕರಿಸಿ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಪರಿಶಿಷ್ಟ ಜಾತಿಗೆ ಇರುವ ಒಟ್ಟು ಶೇ.17 ಮೀಸಲಾತಿಯಲ್ಲಿ ಎಡಗೈ-ಬಲಗೈ (ಗ್ರೂಪ್‌ ಎ ಮತ್ತು ಬಿ) ಸಮುದಾಯಗಳಿಗೆ ತಲಾ ಶೇ.6, ಕೊರಚ, ಕೊರಮ, ಭೋವಿ, ಲಂಬಾಣಿ ಹಾಗೂ ಅಲೆಮಾರಿ ಜಾತಿಗಳನ್ನೊಳಗೊಂಡ ಸ್ಪೃಶ್ಯ ಗುಂಪುಗಳಿಗೆ ಶೇ.5ರಷ್ಟು ಮೀಸಲಾತಿ ನಿಗದಿಪಡಿಸಲಾಗಿತ್ತು. ಈ ನಿರ್ಣಯವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.