KSLU 
ಸುದ್ದಿಗಳು

ಕೆಎಸ್‌ಎಲ್‌ಯು ಕುಲಪತಿಯಾಗಿ ಡಾ. ಬಸವರಾಜು ನೇಮಕಾತಿ ರದ್ದತಿಗೆ ಕೋರಿಕೆ; ರಾಜ್ಯಪಾಲರಿಂದ ಏಕಪಕ್ಷೀಯ ನಿರ್ಧಾರದ ಆರೋಪ

ಅತಿಥಿ ಉಪನ್ಯಾಸಕರನ್ನು ಅಕ್ರಮವಾಗಿ ನೇಮಕ ಮಾಡಿದ ಆರೋಪದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಆಡಳಿತ ವಿಭಾಗದ ರಿಜಿಸ್ಟ್ರಾರ್‌ ಆಗಿದ್ದ ಡಾ. ಬಸವರಾಜು ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖ.

Bar & Bench

ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್‌ಎಲ್‌ಯು) ಕುಲಪತಿ ಹುದ್ದೆಗೆ ಡಾ. ಸಿ ಬಸವರಾಜು ಅವರನ್ನು ರಾಜ್ಯಪಾಲರು ನೇಮಕ ಮಾಡಿರುವ ಆದೇಶವನ್ನು ರದ್ದುಪಡಿಸಲು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಆಗಸ್ಟ್‌ 18ಕ್ಕೆ ಮುಂದೂಡಿದೆ.

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಹಿರಿಯ ಪ್ರಾಧ್ಯಾಪಕರಾದ ನಂದಿಮಠ ಓಂಪ್ರಕಾಶ್‌ ವೀರಯ್ಯ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ರಾಜ್ಯಪಾಲರ ಪರ ವಕೀಲರ ಕೋರಿಕೆಯ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಿದೆ.

ರಾಜ್ಯಪಾಲರು ಯಾವುದೇ ಅರ್ಹತೆ ಪರಿಗಣಿಸದೆ ಹಾಗೂ ಮುಖ್ಯಮಂತ್ರಿ ಅವರ ಅನುಮತಿ ಪಡೆಯದೇ ಏಕಪಕ್ಷೀಯ ಮತ್ತು ಅಕ್ರಮವಾಗಿ ಡಾ. ಬಸವರಾಜು ಅವರನ್ನು 2022ರ ಸೆಪ್ಟೆಂಬರ್‌ 22ರಂದು ಕುಲಪತಿಯಾಗಿ ನೇಮಕ ಮಾಡಿದ್ದಾರೆ. ಡಾ. ಬಸವರಾಜು ಅವರಿಗೆ ಅಗತ್ಯ ಅನುಭವ ಇಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಕೆಎಸ್‌ಎಲ್‌ಯುಗೆ ಡಾ. ಬಸವರಾಜು ಅವರನ್ನು ನೇಮಕ ಮಾಡುವ ಮೂಲಕ ರಾಜ್ಯಪಾಲರು ಕೆಎಸ್‌ಎಲ್‌ಯು ಕಾಯಿದೆ 2009ರ ಸೆಕ್ಷನ್‌ 14(3) ಅನ್ನು ಉಲ್ಲಂಘಿಸಿದ್ದಾರೆ. ಅರ್ಜಿದಾರ ನಂದಿಮಠ ಓಂಪ್ರಕಾಶ್‌ ವೀರಯ್ಯ ಅವರಿಗೆ ಕಾನೂನು ಪ್ರಾಧ್ಯಾಪಕರಾಗಿ, ಸಂಶೋಧನೆ ಮತ್ತು ಕಾನೂನು ಕನ್ಸಲ್ಟೆನ್ಸಿ ಯಲ್ಲಿ 26 ವರ್ಷಗಳ ಅನುಭವವಿದ್ದು, ಎರಡು ವರ್ಷ ಸಕ್ರಿಯವಾಗಿ ವಕೀಲರಾಗಿ ಕೆಲಸ ಮಾಡಿದ್ದಾರೆ. ಸದ್ಯ ಎನ್‌ಎಲ್‌ಎಸ್‌ಐಯುನ 'ಥಿಂಕ್‌ ಟ್ಯಾಂಕ್‌ ಆನ್‌ ಹೆಲ್ತ್‌' ವಿಭಾಗದಲ್ಲಿ ಹಿರಿಯ ಪ್ರೊಫೆಸರ್‌ ಆಗಿದ್ದಾರೆ ಎಂದು ವಿವರಿಸಲಾಗಿದೆ.

ಡಾ. ಅಶೋಕ್‌ ರಾಮಪ್ಪ ಪಾಟೀಲ್‌, ಡಾ. ಸಿ ಬಸವರಾಜು ಮತ್ತು ಡಾ. ಒ ವಿ ನಂದಿಮಠ ಅವರ ಹೆಸರನ್ನು ರಾಜ್ಯ ಸರ್ಕಾರಕ್ಕೆ ಶೋಧನಾ ಸಮಿತಿ ಶಿಫಾರಸ್ಸು ಮಾಡಿತ್ತು. ಸರ್ಕಾರವು ಈ ಹೆಸರುಗಳನ್ನು ಪ್ರೊ ವೈಸ್‌ ಚಾನ್ಸೆಲರ್‌ ಆದ ಕಾನೂನು ಸಚಿವರಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿತ್ತು. ಕಾನೂನು ಸಚಿವರು ಡಾ. ಒ ವಿ ನಂದಿಮಠ ಅವರ ಹೆಸರನ್ನು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಿದ್ದರು. ಇದನ್ನು ಆಧರಿಸಿ ಮುಖ್ಯಮಂತ್ರಿ ಅವರು ನಂದಿಮಠ ಅವರನ್ನು ಕುಲಪತಿಯನ್ನಾಗಿ ನೇಮಕ ಮಾಡಲು ಒಪ್ಪಿಗೆ ನೀಡಿದ್ದರು ಎಂದು ವಿವರಿಸಲಾಗಿದೆ.

ಅತಿಥಿ ಉಪನ್ಯಾಸಕರನ್ನು ಅಕ್ರಮವಾಗಿ ನೇಮಕ ಮಾಡಿದ ಆರೋಪದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಆಡಳಿತ ವಿಭಾಗದ ರಿಜಿಸ್ಟ್ರಾರ್‌ ಆಗಿದ್ದ ಡಾ. ಬಸವರಾಜು ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಈ ಸಂಬಂಧ ಡಾ. ಬಸವರಾಜು ಸಲ್ಲಿಸಿರುವ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಡಾ. ಬಸವರಾಜು ಅವರು ಇಲಾಖಾ ತನಿಖೆ ಎದುರಿಸುತ್ತಿದ್ದು, ಅವರು ಕುಲಪತಿಯಾಗಲು ಅನರ್ಹ. ಇವರ ಹೆಸರನ್ನು ಶಿಫಾರಸ್ಸು ಮಾಡಬಾರದಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ಅರ್ಜಿಗೆ ಸಂಬಂಧಿಸಿದಂತೆ 2023ರ ಮಾರ್ಚ್‌ 15ರಂದು ನ್ಯಾ. ಇ ಎಸ್‌ ಇಂದಿರೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠವು ರಾಜ್ಯಪಾಲರು ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತ್ತು.