ಸುದ್ದಿಗಳು

ಸ್ಮಾರ್ಟ್‌ ಮೀಟರ್‌ ಟೆಂಡರ್‌ ರದ್ದತಿ: ಸರ್ಕಾರ, ಬೆಸ್ಕಾಂ, ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಹೈಕೋರ್ಟ್‌ ನೋಟಿಸ್‌

ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಲಾಭ ಮಾಡಿಕೊಡಲು ಟೆಂಡರ್‌ ನಡೆಸಲಾಗಿದ್ದು, ಇದರಲ್ಲಿ ಅವರ ಪಾತ್ರವೇ ಇಲ್ಲ. ಎಲ್ಲರನ್ನು ನೇರವಾಗಿ ಟೆಂಡರ್‌ನಲ್ಲಿ ಭಾಗವಹಿಸುವಂತೆ ಬೆಸ್ಕಾಂ ಸೂಚಿಸಬಹುದಿತ್ತು. ಆದರೆ, ಅದನ್ನು ಮಾಡಿಲ್ಲ ಎಂದು ಆಕ್ಷೇಪಿಸಲಾಗಿದೆ.

Bar & Bench

ವಿದ್ಯುತ್‌ ಬಳಕೆಗೆ ಸಂಬಂಧಿಸಿದಂತೆ ನೈಜ ಸಮಯದಲ್ಲಿ ಮಾಹಿತಿ ಒದಗಿಸುವ ಸ್ಮಾರ್ಟ್‌ ಮೀಟರ್‌ಗಳ ಅಳವಡಿಕೆ ಮತ್ತು ಟೆಂಡರ್‌ಗೆ ಆಕ್ಷೇಪಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಸಂಸ್ಥೆ ಹಾಗೂ ದಾವಣೆಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಹೊರಡಿಸಿರುವ ಸುತ್ತೋಲೆ ರದ್ದತಿ ಹಾಗೂ ದಾವಣೆಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಸ್ಮಾರ್ಟ್‌ ಮೀಟರ್‌ಗಳ ಮಾರಾಟ ಮತ್ತು ನಿರ್ವಹಣೆ ಟೆಂಡರ್‌ ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ವಿದ್ಯುತ್‌ ಸೇನೆ, ರಾಮಚಂದ್ರ ಅನವೇರಿ ಮತ್ತು ಜಯಪಾಲ ಮತ್ತಿತರು ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ಅರ್ಜಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್‌ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ಅವರು “ಎಲ್ಲಾ ಗ್ರಾಹಕರು ಸ್ಮಾರ್ಟ್‌ ಮೀಟರ್‌ಗೆ ವರ್ಗಾವಣೆಯಾಗಬೇಕು ಎಂದು ಬೆಸ್ಕಾಂ ಹೇಳಿದೆ. ರಾಜಶ್ರೀ ಎಲೆಕ್ಟ್ರಿಕಲ್ಸ್‌ ಮತ್ತು ಬೆಸ್ಕಾಂ ನಡುವೆ ಏನೋ ಹೊಂದಾಣಿಕೆಯಾಗಿದೆ. ಇದರಿಂದ ಗ್ರಾಹಕರಿಗೆ ಸಮಸ್ಯೆಯಾಗುತ್ತಿದ್ದು, ಸ್ಮಾರ್ಟ್‌ ಮೀಟರ್‌ ಬೆಲೆ ದುಬಾರಿಯಾಗಿದೆ. ಬೇರೆ ರಾಜ್ಯಗಳಲ್ಲಿ ಸಿಂಗಲ್‌ ಫೇಸ್‌ ಸ್ಮಾರ್ಟ್‌ ಮೀಟರ್‌ಗೆ ₹900 ಇದೆ. ರಾಜ್ಯದಲ್ಲಿ ಸಿಂಗಲ್‌ ಫೇಸ್‌ ಮೀಟರ್‌ಗೆ ₹5,000 ರೂಪಾಯಿ, ಎಲೆಕ್ಟ್ರಿಕ್‌ ಸ್ಕೂಟರ್‌ ಮತ್ತಿತರ ಚಾರ್ಜಿಂಗ್‌ ಮಾಡಲು ಅಗತ್ಯವಾದ ಮೂರು ಫೇಸ್‌ ಮೀಟರ್‌ಗೆ ₹8,000 ಪಾವತಿಸಬೇಕಿದೆ” ಎಂದು ಆಕ್ಷೇಪಿಸಿದರು.

ಅಲ್ಲದೇ, “ಕೇಂದ್ರ ಸರ್ಕಾರವು ಆರ್‌ಡಿಎಸ್‌ಎಸ್‌ ಯೋಜನೆ ರೂಪಿಸಿದೆ. ಇಲ್ಲಿ ಕೇಂದ್ರವೇ ಮೀಟರ್‌ ಅಳವಡಿಕೆಗೆ ಖರ್ಚು ನೀಡಲಿದೆ. ಆದರೆ, ಇದನ್ನು ಜಾರಿಗೊಳಿಸದೇ ಬೆಸ್ಕಾಂ ಟೆಂಡರ್‌ ನಡೆಸಿದೆ. ಇಲ್ಲಿ ಇಡೀ ಟೆಂಡರ್‌ ಪ್ರಕ್ರಿಯೆಯನ್ನು ಪ್ರಶ್ನಿಸಲಾಗಿದೆ. ಕೆಇಆರ್‌ಸಿ ನಿಯಂತ್ರಣಗಳಲ್ಲಿ ಗ್ರಾಹಕರ ಮೇಲೆ ಬಲವಂತವಾಗಿ ಎಲ್ಲವನ್ನೂ ಹೇರಲಾಗದು ಎಂದು ಹೇಳಲಾಗಿದೆ. ಮಾರ್ಗಸೂಚಿ ಮತ್ತು ಕೆಇಆರ್‌ಸಿ ನಿಯಂತ್ರಣಗಳಿಗೆ ಅನುಗುಣವಾಗಿ ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ. ಎಲ್ಲಾ ಗ್ರಾಹಕರೂ ಸ್ಮಾರ್ಟ್‌ ಮೀಟರ್ ಖರೀದಿಸಲೇಬೇಕು ಎನ್ನುವ ರೀತಿಯಲ್ಲಿ ಕರಡು ರೂಪಿಸಲಾಗಿದೆ. ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಲಾಭ ಮಾಡಿಕೊಡಲು ಈ ಟೆಂಡರ್‌ ನಡೆಸಲಾಗಿದೆ. ಇದರಲ್ಲಿ ಅವರ ಪಾತ್ರವೇ ಇಲ್ಲ. ಎಲ್ಲಾ ಉತ್ಪಾದಕರನ್ನು ನೇರವಾಗಿ ಟೆಂಡರ್‌ನಲ್ಲಿ ಭಾಗವಹಿಸುವಂತೆ ಬೆಸ್ಕಾಂ ಸೂಚಿಸಬಹುದಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. ರಾಜಶ್ರೀ ಎಲೆಕ್ಟ್ರಿಕಲ್ಸ್‌ನವರು ಮೀಟರ್‌ ಉತ್ಪಾದಿಸತ್ತಲೂ ಇಲ್ಲ, ಸಾಫ್ಟ್‌ವೇರ್‌ ನೆರವನ್ನೂ ನೀಡದೇ ಲಾಭ ಮಾಡುತ್ತಿದ್ದಾರೆ” ಎಂದು ಆಕ್ಷೇಪಿಸಿದ್ದಾರೆ.

ರಾಜಶ್ರೀ ಎಲೆಕ್ಟ್ರಿಕಲ್ಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಒಂದೇ ರೀತಿಯ ಕೋರಿಕೆಗಳನ್ನು ಒಳಗೊಂಡ ಅರ್ಜಿಗಳು ಏಕಸದಸ್ಯ ಪೀಠದ ಮುಂದಿವೆ” ಎಂದರು.

ಬೆಸ್ಕಾಂ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು.

ಇದನ್ನು ಆಲಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಒಂದು ತಿಂಗಳು ಮುಂದೂಡಿತು.