ಎಥೆನಾಲ್ ಉತ್ಪಾದನೆಗೆ ಕಬ್ಬು ಬಳಕೆಯನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.
ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬೆಳಗಾವಿ ಮೂಲದ ಎಥೆನಾಲ್ ಉತ್ಪಾದನಾ ಕಂಪೆನಿ ಮೆಸರ್ಸ್ ಆಸ್ಕಿನ್ಸ್ ಬಯೋಫ್ಯೂಯಲ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಜೆ ಅಸ್ಕಿ ಹಾಗೂ ಶ್ರೀ ಬ್ರಹ್ಮಾನಂದಸಾಗರ್ ಜಾಗರಿ ಇಂಡಸ್ಟ್ರೀಸ್‌ನ ಪಾಲುದಾರ ಮಹಾವೀರ್ ಜೆ ಅಸ್ಕಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ಏಕಸದಸ್ಯ ಪೀಠ ನಡೆಸಿತು.
ವಾದ-ಪ್ರತಿವಾದ ಆಲಿಸಿದ ಪೀಠವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅನಿರುದ್ಧ್ ಆರ್.ಜೆ. ನಾಯಕ್ ಅವರು “ಆಸ್ಕಿನ್ಸ್ ಬಯೋಫ್ಯೂಯಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಕಬ್ಬು ನಿಯಂತ್ರಣ ಆದೇಶ-1966 ವ್ಯಾಪ್ತಿಗೆ ಬರುವುದಿಲ್ಲ. ಈ ಕಂಪೆನಿ 2022ರಿಂದ ಕಬ್ಬಿನ ರಸ ಬಳಸಿ ಎಥೆನಾಲ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಅದಕ್ಕೆ ಬ್ರಹ್ಮಾನಂದಸಾಗರ್ ಜಾಗರಿ ಇಂಡಸ್ಟ್ರೀಸ್ ಕಬ್ಬಿನ ರಸ ಮತ್ತು ಪಾಕ ಪೂರೈಸುತ್ತಿವೆ. ರಾಜ್ಯ ಸರ್ಕಾರದ ಕಾನೂನು ಬಾಹಿರ ಕ್ರಮದಿಂದಾಗಿ ಎಥೆನಾಲ್ ಉತ್ಪಾದನೆ ನಿಂತು ಹೋಗಿದೆ. ಹೈಕೋರ್ಟ್ ಆದೇಶದಂತೆ ಕೆಲ ತಿಂಗಳವರೆಗೆ ಎಥೆನಾಲ್ ಉತ್ಪಾದನೆ ನಡೆದಿತ್ತು. ಇದೀಗ ಕೇಂದ್ರ ಸರ್ಕಾರ ಎಥೆನಾಲ್ ಉತ್ಪಾದನೆಗೆ ಕಬ್ಬಿನ ರಸ ಬಳಕೆಯನ್ನು ನಿಷೇಧಿಸಿರುವುದರಿಂದ ಸಂಕಷ್ಟ ಎದುರಾಗಿದೆ. ಇದು ಆರ್ಥಿಕ ದುಷ್ಪರಿಣಾಮಗಳನ್ನು ಉಂಟು ಮಾಡಲಿದೆ. ಆದ್ದರಿಂದ ಅಕ್ಟೋಬರ್ 22ರ ಕೇಂದ್ರ ಸರ್ಕಾರದ ಪ್ರಕಟಣೆಗೆ ತಡೆ ನೀಡಬೇಕು” ಎಂದು ಕೋರಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು ಕೇಂದ್ರ ಸರ್ಕಾರದ ಪ್ರಕಟಣೆಗೆ ತಡೆ ನೀಡುವುದಕ್ಕೆ ಬಲವಾದ ವಿರೋಧ ವ್ಯಕ್ತಪಡಿಸಿದರು. ಜತೆಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಅದಕ್ಕೆ ಸುತ್ತೋಲೆಗೆ ತಡೆ ನೀಡಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿಯನ್ನು ಮುಂದಿನ ವಿಚಾರಣೆ ವೇಳೆ ಪರಿಗಣಿಸಲಾಗುವುದು ಎಂದು ತಿಳಿಸಿದ ಪೀಠ ವಿಚಾರಣೆಯನ್ನು ಮುಂದೂಡಿತು.
ದೇಶದಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸಲು 2026-27ರ ಎಥೆನಾಲ್ ಪೂರೈಕೆ ವರ್ಷ (2026ರ ನವೆಂಬರ್ 1ರಿಂದ 2027ರ ಅಕ್ಟೋಬರ್ 31ರವರೆಗೆ) ಕಬ್ಬಿನ ರಸ ಮತ್ತು ಬಿ-ಹೆವಿ ಮೊಲಾಸಸ್ ಬಳಸಿ ಎಥೆನಾಲ್ ಉತ್ಪಾದಿಸುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಸಕ್ಕರೆ ಆಯುಕ್ತಾಲಯ 2026ರ ಅಕ್ಟೋಬರ್ 22ರಂದು ಎಲ್ಲಾ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳ (ಮದ್ಯ ತಯಾರಿಕಾ ಘಟಕಗಳು), ಅಬಕಾರಿ ಇಲಾಖೆಗೆ ಪ್ರಕಟಣೆ ಹೊರಡಿಸಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.