ಮಾಹಿತಿ ತಂತ್ರಜ್ಞಾನದ (ಐಟಿ) ಉದ್ಯೋಗಿಗಳಿಗೆ ಸೇವಾ ಷರತ್ತುಗಳನ್ನು ವಿಧಿಸುವ ಮತ್ತು ಅವುಗಳನ್ನು ತೆಗೆದುಹಾಕುವ ಅಧಿಕಾರವನ್ನು ಏಕಪಕ್ಷೀಯವಾಗಿ ರಾಜ್ಯ ಸರ್ಕಾರಗಳಿಗೆ ನೀಡಿರುವ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯಿದೆ-1964ರ ಸೆಕ್ಷನ್ 14ರ ಕಾನೂನು ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರ ಕಾಲಾವಕಾಶ ಕೋರಿತು.
ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಒಕ್ಕೂಟ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ ರಮಾನಾಥ ಹೆಗಡೆ ಅವರ ಏಕಸದಸ್ಯ ಪೀಠ ನಡೆಸಿತು.
ಕೇಂದ್ರ ಸರ್ಕಾರದ ಪರ ವಕೀಲರು “ಅರ್ಜಿಯಲ್ಲಿ ಕಾಯಿದೆಯ ಸೆಕ್ಷನ್ 14ರ ಕಾನೂನು ಸಿಂಧುತ್ವ ಪ್ರಶ್ನಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶಬೇಕು” ಎಂದು ಕೋರಿದರು. ಅದಕ್ಕೆ ಅವಕಾಶ ನೀಡಿದ ಪೀಠವು ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ಎಲ್ ಮುರಳೀಧರ ಪೇಶ್ವ ಅವರು “ಐಟಿ ಉದ್ಯೋಗಿಗಳಿಗೆ ಸೇವಾ ಷರತ್ತುಗಳನ್ನು ವಿಧಿಸುವ ಮತ್ತು ಅವುಗಳನ್ನು ತೆಗೆದುಹಾಕುವ ಬಗ್ಗೆ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ಕಾಯಿದೆ-1964ರ ಸೆಕ್ಷನ್ 13(ಎ)ರಲ್ಲಿ ಅವಕಾಶವಿದೆ. ಆದರೆ, ಸೆಕ್ಷನ್ 14 ಜಾರಿಗೆ ತಂದು ಅದರಲ್ಲಿ ರಾಜ್ಯ ಸರ್ಕಾರಗಳಿಗೆ ಅನಿಯಂತ್ರಿತ ಮತ್ತು ಏಕಪಕ್ಷೀಯ ಅಧಿಕಾರವನ್ನು ನೀಡಲಾಗಿದೆ. ಇದರಿಂದ ಸುಮಾರು 20 ಲಕ್ಷ ಐಟಿ ಉದ್ಯೋಗಿಗಳಿಗೆ ತೊಂದರೆ ಆಗಲಿದೆ. ಆದ್ದರಿಂದ, ಸೆಕ್ಷನ್ 14 ಸಂವಿಧಾನಬಾಹಿರ ಎಂದು ಘೋಷಿಸಬೇಕು ಮತ್ತು ಸೆಕ್ಷನ್ 14ನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ 2024ರ ಜೂನ್ 10ರಂದು ಹೊಡಿಸಿರುವ ಅಧಿಸೂಚನೆ ರದ್ದುಪಡಿಸಿಬೇಕು ಎಂದು ಕೋರಿದರು.