ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಎಸ್ ವಿದ್ಯಾಶಂಕರ್ ನೇಮಕವನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ವಿಟಿಯುಗೆ ತುರ್ತು ನೋಟಿಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಪ್ರಾಧ್ಯಾಪಕರಾದ ಹಾಸನದ ಬಿ ಯೋಗೇಶ್ ಮತ್ತು ಕೆ ಎ ವೇಣುಗೋಪಾಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠವು ಕುಲಪತಿ ವಿದ್ಯಾಶಂಕರ್ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.
ವಿಟಿಯು ಅಕಾಡೆಮಿಕ್ ಸೆನೆಟ್ ಮತ್ತು ಬಾಹ್ಯ ಮಂಡಳಿಯ ಸದಸ್ಯರನ್ನೇ ಒಳಗೊಂಡಿದ್ದ ವಿಟಿಯು ಕುಲಪತಿ ಶೋಧನಾ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಈ ನೇಮಕಾತಿ ಮಾಡಲಾಗಿದೆ. ಇದು ಯುಜಿಸಿ ನಿಬಂಧನೆಗಳು–2018 ಮತ್ತು ವಿಟಿಯು ಕಾಯಿದೆಯ ಉಲ್ಲಂಘನೆಯಾಗಿದ್ದು ಈ ನೇಮಕಾತಿಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.