ವಿಡಿಯೋಕಾನ್-ಐಸಿಐಸಿಐ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ವಿಡಿಯೋಕಾನ್ ಸಮೂಹದ ಅಧ್ಯಕ್ಷ ವೇಣುಗೋಪಾಲ್ ಧೂತ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
ಜನವರಿ 4ರಂದು ಪ್ರಕರಣದ ತೀರ್ಪು ಕಾಯ್ದಿರಿಸಿದ್ದ ವಿಶೇಷ ನ್ಯಾಯಾಧೀಶ ಎಸ್ ಎಚ್ ಗ್ವಾಲಾನಿ ಅವರು ಇಂದು ಅದನ್ನು ಪ್ರಕಟಿಸಿದರು.
ಸಿಬಿಐಗೆ ತಾನು ಸಹಕಾರ ನೀಡಿದ್ದರೂ ಕೊಚ್ಚಾರ್ ದಂಪತಿಯನ್ನು ಬಂಧಿಸಿದ ಎರಡು ದಿನಗಳ ಬಳಿಕ ಯಾಂತ್ರಿಕವಾಗಿ ತನ್ನನ್ನು ಬಂಧಿಸಲಾಯಿತು ಎಂದು ಧೂತ್ ಅಳಲು ತೋಡಿಕೊಂಡಿದ್ದರು.
ಧೂತ್ ಅವರು ಮಾಫಿ ಸಾಕ್ಷಿಯಾಗಬಹುದು ಎಂಬ ಕಾರಣಕ್ಕೆ ಅವರನ್ನು ಬಂಧಿಸಿಲ್ಲ ಎಂದು ಕೊಚ್ಚಾರ್ ದಂಪತಿ ಪರ ವಕೀಲರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು. ಇದು ಸಿಬಿಐಗೆ ಒತ್ತಡ ಉಂಟು ಮಾಡಿ ಧೂತ್ ಅವರನ್ನು ಯಾಂತ್ರಿಕವಾಗಿ ಬಂಧಿಸುವಂತಾಯಿತು ಎಂದು ಧೂತ್ ಪರ ವಕೀಲ ಸಂದೀಪ್ ಲಡ್ಡಾ ವಿಚಾರಣೆ ವೇಳೆ ಹೇಳಿದ್ದರು. ಆದರೆ ಸಮನ್ಸ್ ನೀಡಿದರೂ ಧೂತ್ ತನಿಖೆಗೆ ಹಾಜರಾಗಲಿಲ್ಲ ಎಂದು ಸಿಬಿಐ ಪರ ವಕೀಲ ಎ ಲಿಮೊಸಿನ್ ಪ್ರತಿಪಾದಿಸಿದರು.
ಧೂತ್ ಮಾಲೀಕತ್ವದ ವಿಡಿಯೊಕಾನ್ ಸಮೂಹಕ್ಕೆ 2012ರಲ್ಲಿ ₹3,250 ಕೋಟಿ ಸಾಲ ನೀಡುವಾಗ ವಂಚನೆ ಮತ್ತು ಅಕ್ರಮ ಎಸಗಿದ ಆರೋಪ ಚಂದಾ ಕೊಚ್ಚಾರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಅವರ ಮೇಲಿದ್ದು, ಇದು ಐಸಿಐಸಿಐ ಬ್ಯಾಂಕ್‌ಗೆ ವಸೂಲಾಗದ ಅನುತ್ಪಾದಕ ಸಾಲವಾಗಿ ಪರಿಣಮಿಸಿತ್ತು. ಇಬ್ಬರೂ ಆರೋಪಿಗಳನ್ನು ಡಿ. 25ರಂದು ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಮೂರು ದಿನಗಳ ಕಾಲ ಸಿಬಿಐಕ್ಕೆ ಒಪ್ಪಿಸಿತ್ತು. ಡಿ 26ರಂದು ಧೂತ್ ಅವರ ಬಂಧನವಾಗಿತ್ತು.