Supreme Court, Chandigarh Mayor Polls; RO Anil Masih (R)  
ಸುದ್ದಿಗಳು

ಚಂಡೀಗಢ ಮೇಯರ್ ಚುನಾವಣೆ: ಸುಪ್ರೀಂ ಕೋರ್ಟ್‌ನಲ್ಲಿ ಬೇಷರತ್ ಕ್ಷಮೆ ಯಾಚಿಸಿದ ಚುನಾವಣಾಧಿಕಾರಿ ಅನಿಲ್ ಮಸೀಹ್‌

ಮಸೀಹ್‌ ಮತಪತ್ರ ವಿರೂಪಗೊಳಿಸಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಚಂಡೀಗಢ ಮೇಯರ್ ಆಗಿ ಘೋಷಿಸಿದ್ದ ಅನಿಲ್ ಮಸೀಹ್‌ ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಕಳೆದ ಫೆಬ್ರವರಿಯಲ್ಲಿ ರದ್ದುಗೊಳಿಸಿತ್ತು.

Bar & Bench

ಚಂಡೀಗಢ ಚುನಾವಣೆಯ ಚುನಾವಣಾಧಿಕಾರಿಯಾಗಿದ್ದ ವೇಳೆ ಮತಪತ್ರಗಳನ್ನು ವಿರೂಪಗೊಳಿಸಿದ್ದಕ್ಕಾಗಿ ತೀವ್ರ ಟೀಕೆಗೆ ಒಳಗಾಗಿದ್ದ ಅನಿಲ್‌ ಮಸೀಹ್‌ ಅವರು ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆ ಯಾಚಿಸಿದರು [ಕುಲದೀಪ್‌ ಕುಮಾರ್‌ ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠದೆದುರು ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಮಸೀಹ್‌ ಪರವಾಗಿ ನ್ಯಾಯಾಲಯಕ್ಕೆ ಕ್ಷಮೆ ಯಾಚಿಸಿದರು. ಜುಲೈ ಎರಡನೇ ವಾರದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ಮಸೀಹ್‌ ಮತಪತ್ರಗಳನ್ನು ವಿರೂಪಗೊಳಿಸಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಚಂಡೀಗಢ ಮೇಯರ್ ಆಗಿ ಘೋಷಿಸಿದ್ದ ಅನಿಲ್ ಮಸೀಹ್‌ ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಕಳೆದ ಫೆಬ್ರವರಿಯಲ್ಲಿ ರದ್ದುಗೊಳಿಸಿತ್ತು.

ಬಿಜೆಪಿಯ ಮನೋಜ್ ಸೋಂಕರ್ (ಈಗ ರಾಜೀನಾಮೆ ನೀಡಿದ್ದಾರೆ) ಅವರನ್ನು ಚಂಡೀಗಢ ಮೇಯರ್ ಆಗಿ ಘೋಷಿಸುವಲ್ಲಿ ಚುನಾವಣಾಧಿಕಾರಿ ಅನಿಲ್ ಮಸೀಹ್‌ ಅವರ ವಂಚನೆ ಸಹಾಯ ಮಾಡಿತ್ತು ಎಂದು ಎಎಪಿ ಪಾಲಿಕೆ ಸದಸ್ಯ ಕುಲದೀಪ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮಸೀಹ್ ಕ್ಷಮೆ ಯಾಚಿಸಿದ್ದಾರೆ.  

ಎಎಪಿ ಅಭ್ಯರ್ಥಿ ಪರವಾಗಿ ಚಲಾಯಿಸಲಾಗಿದ್ದ ಎಂಟು ಮತಗಳು ಅಸಿಂಧು ಎಂದು ಮಸೀಹ್‌ ಘೋಷಿಸಿದ್ದರು. ಆದರೆ ಅವರು ಆ ಎಂಟು ಮತಪತ್ರಗಳನ್ನು ವಿರೂಪಗೊಳಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಸೀಹ್‌ ಅವರು ಮಾಡಿದ್ದ ಫಲಿತಾಂಶದ ಘೋಷಣೆಯನ್ನು ತಳ್ಳಿಹಾಕಿದ್ದ ನ್ಯಾಯಾಲಯ ಮೇಯರ್‌ ಚುನಾವಣೆಯಲ್ಲಿ ಎಎಪಿಯ ಕುಮಾರ್‌ ವಿಜಯಿಯಾಗಿದ್ದಾರೆ ಎಂದು ತೀರ್ಪು ನೀಡಿತ್ತು.

ತಾನು ಎಂಟು ಮತಗಳನ್ನು ಅಸಿಂಧುಗೊಳಿಸಿದ್ದು ಏಕೆಂದು ತಿಳಿಸಿದ ಮಸೀಹ್‌ ಅವರ ವಿವರಣೆಯನ್ನು ತಿರಸ್ಕರಿಸಿದ್ದ ಪೀಠ ಅವರ ನಡೆಯನ್ನು ತೀವ್ರವಾಗಿ ಖಂಡಿಸಿತ್ತು.

ಮಸೀಹ್‌ ಮೇಯರ್ ಚುನಾವಣಾ ಪ್ರಕ್ರಿಯೆಯನ್ನು ಅಕ್ರಮವಾಗಿ ತಿರುಚಿದದು ಅವರು ನ್ಯಾಯಾಲಯದೆದುರು ನೀಡಿದ ಹೇಳಿಕೆ ಹಸಿ ಸುಳ್ಳು ಎಂದಿತ್ತು. ಹೀಗಾಗಿ ಮಸೀಹ್‌ಗೆ ಅದು ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು. ಈ ಪ್ರಕರಣವನ್ನು ಜುಲೈನಲ್ಲಿ ನ್ಯಾಯಾಲಯಯ ವಿವರವಾಗಿ ಆಲಿಸಲಿದೆ. ಇಂದು ಸುಪ್ರೀಂ ಕೋರ್ಟ್ ಮುಂದೆ ಕುಲದೀಪ್ ಕುಮಾರ್ ಪರವಾಗಿ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.