ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ವಂಚನೆ ಎಸಗಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬುಧವಾರ ಚಂಡೀಗಢ ಸರ್ಕಾರ ಮತ್ತು ಪಾಲಿಕೆಯ ಪ್ರತಿಕ್ರಿಯೆ ಕೇಳಿದೆ.
ಎಎಪಿ ಪಾಲಿಕೆ ಸದಸ್ಯ ಕುಲದೀಪ್ ಕುಮಾರ್ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ಹರ್ಷ್ ಬಂಗರ್ ಅವರಿದ್ದ ವಿಭಾಗೀಯ ಪೀಠ, ಪ್ರತಿವಾದಿಗಳು ಮೂರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು. ಆದರೆ, ಚುನಾವಣಾ ಫಲಿತಾಂಶಕ್ಕೆ ಪೀಠವು ಯಾವುದೇ ಮಧ್ಯಂತರ ತಡೆ ನೀಡಿಲ್ಲ.
ಮಂಗಳವಾರ ನಡೆದ ಚುನಾವಣೆಯ ದಾಖಲೆಗಳನ್ನು ಈಗಾಗಲೇ ಭದ್ರತಾ ಕೋಣೆಯಲ್ಲಿ ರಕ್ಷಿಸಿಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಚುನಾವಣೆಯಲ್ಲಿ ಬಿಜೆಪಿಯ ಮನೋಜ್ ಸೋಂಕರ್ ಅವರು 16 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್-ಎಎಪಿಯ ಜಂಟಿ ಅಭ್ಯರ್ಥಿ ಕುಲದೀಪ್ ಕುಮಾರ್ 12 ಮತಗಳನ್ನು ಪಡೆದಿದ್ದರು. ಆದರೆ, ಮತ ಎಣಿಕೆಯ ವೇಳೆ ಎಂಟು ಮತಗಳನ್ನು ಚುನಾವಣಾಧಿಕಾರಿಯು ಅಮಾನ್ಯವೆಂದು ತಿರಸ್ಕರಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ಈ ನಿರ್ಧಾರವನ್ನು ಎಎಪಿ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಕುಲದೀಪ್ ಕುಮಾರ್ ಪ್ರಶ್ನಿಸಿದ್ದು, ಮತ ಎಣಿಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ವಂಚನೆ ಮತ್ತು ಫೋರ್ಜರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕೆಂದು ಕುಮಾರ್ ಪ್ರಾರ್ಥಿಸಿದ್ದಾರೆ.