ಸುಪ್ರೀಂ ಕೋರ್ಟ್, ಚಂಡೀಗಢ ಮೇಯರ್ ಚುನಾವಣೆ; ಆರ್ ಒ ಅನಿಲ್ ಮಸಿಹ್ (ರಿ)
ಸುಪ್ರೀಂ ಕೋರ್ಟ್, ಚಂಡೀಗಢ ಮೇಯರ್ ಚುನಾವಣೆ; ಆರ್ ಒ ಅನಿಲ್ ಮಸಿಹ್ (ರಿ) 
ಸುದ್ದಿಗಳು

ಚಂಡೀಗಢ ಮೇಯರ್ ಚುನಾವಣೆ: ಎಎಪಿ ಅಭ್ಯರ್ಥಿಯ ಗೆಲುವು ಘೋಷಿಸಿದ ಸುಪ್ರೀಂ ಕೋರ್ಟ್

Bar & Bench

ಚಂಡೀಗಢದ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ್ದ ಚುನಾವಣಾಧಿಕಾರಿಯ (ಆರ್‌ಒ- ರಿಟರ್ನಿಂಗ್‌ ಆಫೀಸರ್‌) ಅನಿಲ್ ಮಸೀಹ್‌ ಅವರ ನಿರ್ಧಾರವನ್ನು ಮಂಗಳವಾರ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ವಿಜೇತರೆಂದು ಘೋಷಿಸಿದೆ.

ತಾನು ಎಂಟು ಮತಗಳನ್ನು ಅಸಿಂಧುಗೊಳಿಸಿದ್ದು ಏಕೆಂದು ತಿಳಿಸಿದ ಮಸೀಹ್‌ ಅವರ ವಿವರಣೆಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ರಿಟರ್ನಿಂಗ್ ಅಧಿಕಾರಿ ಅನಿಲ್ ಮಸಿಹ್ ಅವರ ನಡೆಯನ್ನು ನ್ಯಾಯಾಲಯ ಇಂದು ಕೂಡ ಬಲವಾಗಿ ಖಂಡಿಸಿತು. ಮಸೀಹ್‌ ಮೇಯರ್ ಚುನಾವಣೆಯ ಹಾದಿಯನ್ನು ಅಕ್ರಮವಾಗಿ ಬದಲಾಯಿಸಿದ್ದು ಅವರು ನ್ಯಾಯಾಲಯದೆದುರು ನೀಡಿದ ಹೇಳಿಕೆ ಹಸಿ ಸುಳ್ಳು ಎಂದ ಪೀಠ ಆತನಿಗೆ ಶೋಕಾಸ್‌ ನೋಟಿಸ್‌ ನೀಡಿತು.

"ಸುಳ್ಳು ಹೇಳಿಕೆ ನೀಡುವ ಬಗ್ಗೆ ಮಸೀಹ್‌ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸಿಆರ್‌ಪಿಸಿ ಸೆಕ್ಷನ್ 340 ('ಸಾರ್ವಜನಿಕ ಸೇವಕರ ಕಾನೂನುಬದ್ಧ ಅಧಿಕಾರವನ್ನು ನಿಂದಿಸುವ ಕಾನೂನು ಕ್ರಮ' ಕುರಿತು ಹೇಳುವ ಸೆಕ್ಷನ್ 195 ಕ್ಕೆ ಸಂಬಂಧಿಸಿದೆ) ಅಡಿಯಲ್ಲಿ ಅನಿಲ್ ಮಸೀಹ್‌ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ನ್ಯಾಯಾಂಗ ರಿಜಿಸ್ಟ್ರಾರ್‌ಗೆ ಶೋಕಾಸ್ ನೀಡುವಂತೆ ನಿರ್ದೇಶಿಸಲಾಗಿದೆ. ಶೋಕಾಸ್ ನೋಟಿಸ್‌ಗೆ ಉತ್ತರಿಸಲು ಅನಿಲ್ ಮಸೀಹ್‌ ಅವರಿಗೆ ಅವಕಾಶವಿದೆ" ಎಂದು ನ್ಯಾಯಾಲಯ ಆದೇಶಿಸಿದೆ.

ಬಿಜೆಪಿಯ ಮನೋಜ್ ಸೋಂಕರ್ (ಈಗ ರಾಜೀನಾಮೆ ನೀಡಿದ್ದಾರೆ) ಅವರನ್ನು ಚಂಡೀಗಢ ಮೇಯರ್ ಆಗಿ ಘೋಷಿಸುವಲ್ಲಿ ಚುನಾವಣಾಧಿಕಾರಿ ಅನಿಲ್ ಮಸೀಹ್‌ ಅವರ ವಂಚನೆ ಸಹಾಯ ಮಾಡಿತ್ತು ಎಂದು ಎಎಪಿ ಪಾಲಿಕೆ ಸದಸ್ಯ ಕುಲದೀಪ್ ಕುಮಾರ್ ಅರ್ಜಿ ಸಲ್ಲಿಸಿದ್ದರು.

ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ

ನಿನ್ನೆ ನೀಡಿದ್ದ ಆದೇಶದನ್ವಯ ಇಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮತಪತ್ರಗಳನ್ನು ಸಲ್ಲಿಸಲಾಯಿತು. ಅವುಗಳನ್ನು ಪರಿಶೀಲಿಸಿದ ನ್ಯಾಯಾಲುಯ ಮಸೀಹ್‌ ಅಮಾನತುಗೊಳಿಸಿದ ಈ ಮತಪತ್ರಗಳು ಎಎಪಿ ಅಭ್ಯರ್ಥಿಯ ಪರವಾಗಿ ಚಲಾಯಿಸಿದ ಮತಗಳಾಗಿವೆ ಎಂದು ಹೇಳಿತು.

"ನೋಡಿ, ಕುಲದೀಪ್ ಕುಮಾರ್ ಮತ್ತು ಮನೋಜ್ ಕುಮಾರ್. ಏನು ಮಾಡಲಾಗಿದೆ ಎಂದರೆ ... ಎಂಟು ಮತಗಳು ಅಮಾನ್ಯ.. ಎಲ್ಲಾ ಎಂಟು ಮತಗಳು ಕುಲದೀಪ್ ಕುಮಾರ್ ಅವರ ಪರವಾಗಿವೆ. ಆರ್ ಒ ಕೆಳಭಾಗದಲ್ಲಿ ಸಹಿ ಹಾಕಿ ಅಲ್ಲಿ ಗೆರೆಯೊಂದನ್ನು ಎಳೆಯುತ್ತಾರೆ ... ನಾನು ಶ್ರೀ ಮಸೀಹ್‌ ಅವರಿಗೆ ಒಂದು ಪ್ರಶ್ನೆ ಕೇಳುವೆ - (ಮತಪತ್ರ) ವಿರೂಪಗೊಳಿಸಿರುವುದರಿಂದ ಅದನ್ನು (ಗೆರೆ) ಹಾಕಿದ್ದಾಗಿ ನೀವು ಹೇಳಿದ್ದಿರಿ ... ಅದು ಎಲ್ಲಿ ವಿರೂಪಗೊಂಡಿದೆ?" ಎಂದು ಸಿಜೆಐ ಚಂದ್ರಚೂಡ್ ಪ್ರಶ್ನಿಸಿದರು.

ಕುಲದೀಪ್ ಕುಮಾರ್‌ ಪರ ಹಿರಿಯ ವಕೀಲ ಎ ಎಂ ಸಿಂಘ್ವಿ, ಮಸೀಹ್‌ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಪಂಜಾಬ್‌ ಅಡ್ವೊಕೇಟ್ ಜನರಲ್ (ಎಜಿ) ಗುರ್ಮಿಂದರ್ ಸಿಂಗ್‌ ವಾದ ಮಂಡಿಸಿದರು. ಬೇರೆ ಕೆಲವು ಅಭ್ಯರ್ಥಿಗಳ ಪರವಾಗಿ ಹಿರಿಯ ವಕೀಲ ಮಣಿಂದರ್ ಸಿಂಗ್, ಚಂಡೀಗಢ ಆಡಳಿತದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು.