Karnataka High Court 
ಸುದ್ದಿಗಳು

ಸರಳ ವಾಸ್ತು ಚಂದ್ರಶೇಖರ ಅಂಗಡಿ ಕೊಲೆ ಪ್ರಕರಣ: ಆರೋಪಿ ಮಹಾಂತೇಶ ಶಿರೂರ್‌ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಅರ್ಜಿದಾರನ ಕೃತ್ಯ ಸಮಾಜದಲ್ಲಿ ಸಂಚಲನ ಮೂಡಿಸಿರುವುದಲ್ಲದೆ ದೊಡ್ಡ ಪ್ರಮಾಣದಲ್ಲಿ ಭಯವನ್ನು ಸಹ ಸೃಷ್ಟಿಸಿದೆ ಎಂದಿರುವ ನ್ಯಾಯಾಲಯ.

Bar & Bench

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಅಂಗಡಿ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಆರೋಪಿ ಮಹಾಂತೇಶ ಶಿರೂರ್‌ಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.

ಮಹಾತೇಂಶ್‌ ಶಿರೂರ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಸ್‌ ರಾಚಯ್ಯ ಅವರ ಪೀಠ ಆದೇಶಿಸಿದೆ.

ಹಳೆಯ ದ್ವೇಷದಿಂದ ಅರ್ಜಿದಾರ ಆರೋಪಿಯು ಚಂದ್ರಶೇಖರ ಗುರೂಜಿಯನ್ನು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿರುವ ರೀತಿ ನೋಡಿದರೆ, ಗುರೂಜಿ ಮೇಲೆ ಆರೋಪಿ ಎಷ್ಟು ದ್ವೇಷ ಬೆಳೆಸಿಕೊಂಡಿದ್ದ ಎನ್ನುವುದನ್ನು ಸೂಚಿಸುತ್ತದೆ. ಗುರೂಜಿ ಹತ್ಯೆ ಪೂರ್ವಯೋಜಿತ ಕೃತ್ಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಅರ್ಜಿದಾರ ಮಾರಾಕಾಸ್ತ್ರಗಳೊಂದಿಗೆ ಗುರೂಜಿಯನ್ನು ಭೇಟಿಯಾಗಿ, ಚಾಕುವಿನಿಂದ 56 ಬಾರಿ ಇರಿದು, ತೀವ್ರ ಗಾಯಗೊಳಿಸಿ ಕೊಲೆ ಮಾಡಿದ್ದಾನೆ. ಅರ್ಜಿದಾರನ ಕೃತ್ಯ ಸಮಾಜದಲ್ಲಿ ಸಂಚಲನ ಮೂಡಿಸಿರುವುದಲ್ಲದೆ ದೊಡ್ಡ ಪ್ರಮಾಣದಲ್ಲಿ ಭಯವನ್ನು ಸೃಷ್ಟಿಸಿದೆ ಎಂದು ನ್ಯಾಯಾಲಯ ನುಡಿದಿದೆ.

ಮೃತ ಗುರೂಜಿಯ ಕುಟುಂಬದ ಸದಸ್ಯರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ಜಾಮೀನು ಅರ್ಜಿ ತೀರ್ಮಾನಿಸುವಾಗ ಆರೋಪಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಆದರೆ, ವೈಯಕ್ತಿಕ ಸ್ವಾತಂತ್ರ ನಿರಂಕುಶವಾಗಿರುವುದಿಲ್ಲ. ಅದನ್ನು ನ್ಯಾಯಯುತವಾದ ಕಾರಣಗಳಿಂದ ನಿರ್ಬಂಧಿಸಹುದು. ವ್ಯಕ್ತಿಯು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದಾಗ ವೈಯಕ್ತಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಮುಂದುವರೆದು, ಸಮಾಜವು ಓರ್ವ ವ್ಯಕ್ತಿಯಿಂದ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತದೆ. ಪ್ರಜೆಯು ಕಾನೂನು ಪಾಲಿಸಬೇಕಾಗುತ್ತದೆ. ಸಮಾಜದ ನಿಯಮಗಳಿಗೆ ಗೌರವ ತೋರಿಸಬೇಕಾಗುತ್ತದೆ. ಅರ್ಜಿದಾರ ಚಂದ್ರಶೇಖರ ಗುರೂಜಿಯನ್ನು ಕೊಲೆ ಮಾಡಿರುವುದು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ದಾಖಲೆಗಳಿಂದ ತಿಳಿದುಬರುವ ಕಾರಣ ಜಾಮೀನು ಪಡೆಯಲು ಮಹಂತೇಶ್‌ ಅರ್ಹನಾಗಿಲ್ಲ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಸರಳ ವಾಸ್ತು ಸಂಸ್ಥೆಯ ಉದ್ಯೋಗದಿಂದ ಅರ್ಜಿದಾರ ಮಹಾಂತೇಶ್‌ನನ್ನು ಗುರೂಜಿ ತೆಗೆದುಹಾಕಿದ್ದರು. ಈ ದ್ವೇಷದಿಂದ ಕಾರ್ಯಕ್ರಮವೊಂದಕ್ಕೆ ಹಾಜರಾಗಲು ಬೆಳಗಾವಿಗೆ ಬಂದಿದ್ದ ಗುರೂಜಿಯನ್ನು ಹುಬ್ಬಳ್ಳಿಯ ಹೋಟೆಲ್‌ ಪ್ರೆಸಿಟೆಂಡ್‌ ಅಲ್ಲಿ ಭೇಟಿಯಾಗಿದ್ದ ಆರೋಪಿ ಆಶೀರ್ವಾದ ಪಡೆಯುವ ನೆಪದಲ್ಲಿ ಚಾಕುವಿನಿಂದ ಬರ್ಬರವಾಗಿ ಇರಿದು ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಗುರೂಜಿ ಸಾವನ್ನಪ್ಪಿದ್ದರು. ಧಾರವಾಡದ ವಿದ್ಯಾನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.