Hubli idgah maidan and Karnataka HC 
ಸುದ್ದಿಗಳು

ಹುಬ್ಬಳ್ಳಿ ಈದ್ಗಾ ಮೈದಾನದ ಹೆಸರು ಬದಲಾವಣೆಗೆ ಆಕ್ಷೇಪಿಸಿದ್ದ ಪಿಐಎಲ್‌ ಹಿಂಪಡೆದ ಅರ್ಜಿದಾರರು

ಆಕ್ಷೇಪಣೆ ಕುರಿತಂತೆ ಪಾಲಿಕೆಯು ವ್ಯತಿರಿಕ್ತ ನಿರ್ಣಯ ಕೈಗೊಂಡರೆ ಅರ್ಜಿದಾರರು ಮತ್ತೆ ನ್ಯಾಯಾಲಯದ ಕದತಟ್ಟಬಹುದು ಎಂದು ಅರ್ಜಿದಾರರಿಗೆ ಸಲಹೆ ನೀಡಿದ ಪೀಠ.

Bar & Bench

ಹುಬ್ಬಳ್ಳಿಯ ಈದ್ಗಾ ಮೈದಾನದ ಹೆಸರನ್ನು ‘ಕಿತ್ತೂರು ರಾಣಿ ಚೆನ್ನಮ್ಮ ಮೈದಾನ’ ಎಂಬುದಾಗಿ ಬದಲಾಯಿಸಲು ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಕೈಗೊಂಡಿದ್ದ ನಿರ್ಣಯವನ್ನು ರದ್ದುಪಡಿಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ಅರ್ಜಿದಾರರು ಹಿಂಡೆದುಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ನಿವಾಸಿ ಹುಸೈನ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶ ಪರಿಶೀಲಿಸಿದ ಪೀಠವು ಈದ್ಗಾ ಮೈದಾನದ ಹೆಸರನ್ನು ‘ಕಿತ್ತೂರು ರಾಣಿ ಚೆನ್ನಮ್ಮ ಮೈದಾನ’ ಎಂಬುದಾಗಿ ಬದಲಾಯಿಸಲು ಪಾಲಿಕೆ 2022ರ ಆಗಸ್ಟ್‌ 25ರಂದು ನಿರ್ಣಯ ಕೈಗೊಂಡಿದೆ. ಈ ಸಂಬಂಧ 2023ರ ಫೆಬ್ರವರಿ 8ರಂದು ಸಾರ್ವಜನಿಕರ ಆಕ್ಷೇಪಣೆ ಕೋರಲಾಗಿದೆ. ಅದರಂತೆ ಅರ್ಜಿದಾರರು ಸಹ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ, ಈ ಆಕ್ಷೇಪಣೆ ಮೇಲೆ ಪಾಲಿಕೆಯು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅದಕ್ಕೂ ಮುನ್ನವೇ ಈ ಅರ್ಜಿ ಸಲ್ಲಿಸಲಾಗಿದೆ. ಆದ್ದರಿಂದ ಅರ್ಜಿಯು ಅಪಕ್ವವಾಗಿದೆ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಆಕ್ಷೇಪಣೆ ಕುರಿತಂತೆ ಪಾಲಿಕೆಯು ವ್ಯತಿರಿಕ್ತ ನಿರ್ಣಯ ಕೈಗೊಂಡರೆ ಅರ್ಜಿದಾರರು ಮತ್ತೆ ನ್ಯಾಯಾಲಯದ ಕದತಟ್ಟಬಹುದು ಎಂದು ಅರ್ಜಿದಾರರಿಗೆ ಪೀಠವು ಸಲಹೆ ನೀಡಿತು. ಇದನ್ನು ಒಪ್ಪಿ ಅರ್ಜಿಯನ್ನು ಹಿಂಪಡೆಯಲಾಯಿತು.

ಹುಬ್ಬಳ್ಳಿಯ ಈದ್ಗಾ ಮೈದಾನವು ಧಾರ್ಮಿಕ ಗುಣಲಕ್ಷಣ ಹೊಂದಿದೆ. ಬಹಳ ಹಿಂದಿನಿಂದಲೂ ರಂಜಾನ್ ಮತ್ತು ಬಕ್ರೀದ್ ಹಬ್ಬಗಳಂದು ಅರ್ಜಿದಾರರು ಸೇರಿದಂತೆ ಇಸ್ಲಾಂ ಸಮುದಾಯದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಾರೆ. ಇದರಿಂದಲೇ ಈ ಜಾಗವನ್ನು ತೆರೆದ ಪ್ರದೇಶವಾಗಿ ನಿರ್ವಹಣೆ ಮಾಡಲಾಗುತ್ತದೆ. ಆದರೆ, ಈದ್ಗಾ ಮೈದಾನದ ಹೆಸರನ್ನು ‘ಕಿತ್ತೂರು ರಾಣಿ ಚೆನ್ನಮ್ಮ ಮೈದಾನ’ ಎಂಬುದಾಗಿ ಬದಲಾಯಿಸಲು ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ 2022ರ ಆಗಸ್ಟ್‌ 25ರಂದು ನಿರ್ಣಯ ಕೈಗೊಂಡಿದೆ. ಸಾರ್ವಜನಿಕ ಪ್ರದೇಶದ ಅದರಲ್ಲೂ ಧಾರ್ಮಿಕ ಗುಣಲಕ್ಷಣ ಹೊಂದಿರುವ ಜಾಗದ ಹೆಸರನ್ನು ಹೀಗೆ ಏಕಪಕ್ಷೀಯವಾಗಿ ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಪಾಲಿಕೆಯ ನಿರ್ಣಯ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.