<div class="paragraphs"><p>Char dham highway, Supreme Court</p></div>

Char dham highway, Supreme Court

 
ಸುದ್ದಿಗಳು

[ಚಾರ್ ಧಾಮ್] ಮೂರು ಹೆದ್ದಾರಿಗಳ ಅಗಲೀಕರಣಕ್ಕೆ ಸುಪ್ರೀಂಕೋರ್ಟ್‌ ಹಸಿರು ನಿಶಾನೆ: ಮೇಲ್ವಿಚಾರಣೆಗೆ ಎ ಕೆ ಸಿಕ್ರಿ ಸಮಿತಿ

Bar & Bench

ಉನ್ನತಾಧಿಕಾರ ಸಮಿತಿ ಮಾಡಿರುವ ಪರಿಸರ ಸಂಬಂಧಿ ಶಿಫಾರಸುಗಳಿಗೆ ಅನುಗುಣವಾಗಿ ವ್ಯೂಹಾತ್ಮಕ ದೃಷ್ಟಿಯಿಂದ ಪ್ರಮುಖವಾದ ಚಾರ್‌ ಧಾಮ್ ಯೋಜನೆಯ ಮೂರು ಹೆದ್ದಾರಿಗಳ ಅಗಲೀಕರಣಕ್ಕೆ ರಕ್ಷಣಾ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಅನುಮತಿ ನೀಡಿದೆ [ಸಿಟಿಜನ್ಸ್ ಫಾರ್ ಗ್ರೀನ್ ಡೂನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಗಡಿ ದೇಶಗಳೊಂದಿಗೆ ಭದ್ರತೆಗೆ ಸಂಬಂಧಿಸಿದ ಆತಂಕವನ್ನು ಪರಿಗಣಿಸಿ ರಸ್ತೆ ಅಗಲೀಕರಣ ಮಾಡುವ ಅಗತ್ಯವಿದೆ ಎಂಬ ರಕ್ಷಣಾ ಸಚಿವಾಲಯದ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು. "ರಕ್ಷಣಾ ಸಚಿವಾಲಯದ ಅರ್ಜಿಯಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಈಡೇರಿಸುವ ಅಧಿಕಾರ ರಕ್ಷಣಾ ಸಚಿವಾಲಯಕ್ಕೆ ಇದೆ. ಭದ್ರತಾ ಸಮಿತಿಯ ಸಭೆಯಲ್ಲಿ ಎದ್ದಿರುವ ಭದ್ರತೆಗೆ ಸಂಬಂಧಿಸಿದ ಆತಂಕದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯದ ಆಶಯ ಪ್ರಾಮಾಣಿಕವಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಂಗ ಪರಿಶೀಲನೆ ಮಾಡುವಾಗ ಈ ನ್ಯಾಯಾಲಯವು ಸೇನೆಯ ಅವಶ್ಯಕತೆಗಳ ಬಗ್ಗೆ ಮತ್ತೊಂದು ಅಭಿಪ್ರಾಯ ಹೊಂದಿರಬಾರದು. ಅಲ್ಲದೆ ಈ ವಿಚಾರದಲ್ಲಿ ಸರ್ಕಾರದ ನೀತಿಯನ್ನು ನ್ಯಾಯಾಲಯ ಪ್ರಶ್ನಿಸುವಂತಿಲ್ಲ ಎಂದು ಹೇಳಿದ ಪೀಠ ಹೆದ್ದಾರಿಗಳ ನಿರ್ಮಾಣಕ್ಕೆ ಅನುಮತಿ ನೀಡಿತು. ಇಷ್ಟಾದರೂ ಅರ್ಜಿ ಸಲ್ಲಿಸಿರುವ ಸರ್ಕಾರೇತರ ಸಂಸ್ಥೆ ಸಿಟಿಜನ್ಸ್ ಫಾರ್ ಗ್ರೀನ್ ಡೂನ್ ಎತ್ತಿದ ಪರಿಸರಕ್ಕೆ ಸಂಬಂಧಿಸಿದ ಕಳಕಳಿಯನ್ನು ನ್ಯಾಯಾಲಯ ತಳ್ಳಿಹಾಕಲಿಲ್ಲ. ನಿರ್ಮಾಣದ ಸಮಯದಲ್ಲಿ ಕೆಲವು ಸ್ಥಳಗಳಲ್ಲಿ ಸರ್ಕಾರ ಉತ್ತಮ ನಡೆಗಳನ್ನು ಅಳವಡಿಸಿಕೊಂಡಿಲ್ಲ ಎಂಬ ಉನ್ನತಾಧಿಕಾರ ಸಮಿತಿಯ ನಿರ್ಣಯವನ್ನು ಕೂಡ ಪೀಠ ಉಲ್ಲೇಖಿಸಿದೆ. ನ್ಯಾಯಾಲಯ ಉನ್ನತಾಧಿಕಾರ ಸಮಿತಿ ಮಾಡಿರುವ ಪರಿಸರ ಸಂಬಂಧಿ ಶಿಫಾರಸುಗಳನ್ನು ಪಾಲಿಸುವಂತೆ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಯೋಜನೆಯ ಮೇಲ್ವಿಚಾರಣೆಗೆ ಹಾಗೂ ಅದನ್ನು ನೇರವಾಗಿ ನ್ಯಾಯಾಲಯಕ್ಕೆ ವರದಿ ಮಾಡಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಕೆ ಸಿಕ್ರಿ ನೇತೃತ್ವದ ಮೇಲ್ವಿಚಾರಣಾ ಸಮಿತಿಯನ್ನು ಪೀಠ ರಚಿಸಿತು. ಉನ್ನತಾಧಿಕಾರ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲಾಗಿದೆಯೇ ಎನ್ನುವುದನ್ನು ಸಮಿತಿ ಗಮನಿಸಲಿದೆ. ಇದೇ ವೇಳೆ ಹೊಸ ವಿಶ್ಲೇಷಣೆಗಳನ್ನು ನಡೆಸಲು ಹೋಗುವುದಿಲ್ಲ ಎನ್ನುವುದನ್ನು ನ್ಯಾಯಾಲಯ ಖಾತರಿಪಡಿಸಿದೆ. ಯಾವುದೇ ಉಲ್ಲಂಘನೆ ನಡೆದರೆ, ಸಮಿತಿಯ ಅಧ್ಯಕ್ಷರು ಈ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಪೀಠ ಹೇಳಿದೆ. ಮೂರು ಹೆದ್ದಾರಿಗಳ ನಿರ್ಮಾಣದ ಹೊರತಾಗಿಯೂ ಉನ್ನತಾಧಿಕಾರ ಸಮಿತಿಯ ಮೇಲ್ವಿಚಾರಣೆ ಮುಂದುವರೆಯಲಿದೆ ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.