Lawyers 
ಸುದ್ದಿಗಳು

ವಕೀಲೆ ದಯೀನಾ ವಿರುದ್ಧದ ವಂಚನೆ ಪ್ರಕರಣ: ಮುಂದಿನ ವಿಚಾರಣೆವರೆಗೆ ತನಿಖೆಗೆ ಹಾಜರಾಗಲು ಸೂಚಿಸದಂತೆ ಹೈಕೋರ್ಟ್‌ ಆದೇಶ

ವಿಧಾನಸೌಧ ಪೊಲೀಸರು ತನಿಖೆಗೆ ಹಾಜರಾಗುವಂತೆ ದಯೀನಾ ಬಾನುಗೆ ಫೆಬ್ರವರಿ 24ರವರೆಗೆ ಸೂಚಿಸಿಬಾರದು ಎಂದು ಆದೇಶಿಸಿರುವ ನ್ಯಾಯಾಲಯವು ಬಾನು ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಈ ಹಿಂದೆ ಮಾಡಿರುವ ಆದೇಶವನ್ನು ವಿಸ್ತರಿಸಿದೆ.

Bar & Bench

ಕೊಲೆ ಆರೋಪಿಗೆ ಜಾಮೀನು ಮಂಜೂರು ಮಾಡಲು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರು ₹50 ಲಕ್ಷ ಲಂಚ ನಿರೀಕ್ಷಿಸುತ್ತಿದ್ದಾರೆ ಎಂದು ಕೊಲೆ ಆರೋಪಿಯ ತಾಯಿಗೆ (ಥೆರೆಸಾ) ತಿಳಿಸಿದ್ದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದಲ್ಲಿ ಫೆಬ್ರವರಿ 24ರವರೆಗೆ ವಕೀಲೆ ಬಿ ಎಂ ದಯೀನಾ ಬಾನು ಅವರನ್ನು ವಿಧಾನಸೌಧ ಠಾಣೆಯ ಪೊಲೀಸರು ತನಿಖೆಗೆ ಹಾಜರಾಗಲು ಸೂಚಿಸಬಾರದು ಎಂದು ನ್ಯಾಯಾಲಯವು ಬುಧವಾರ ಆದೇಶಿಸಿದೆ.

ನ್ಯಾಯಾಲಯದ ನಿರ್ದೇಶನದಂತೆ ಹೈಕೋರ್ಟ್‌ನ ಕಾನೂನು ಘಟಕದ ಜಂಟಿ ರಿಜಿಸ್ಟ್ರಾರ್‌ ರಾಜೇಶ್ವರಿ ಅವರು ನೀಡಿರುವ ದೂರಿನ ಸಂಬಂಧ ದಾಖಲಾಗಿರುವ ವಂಚನೆ ಪ್ರಕರಣ ರದ್ದುಪಡಿಸುವಂತೆ ಕೋರಿ ವಕೀಲೆ ಬಿ ಎಂ ದಯೀನಾ ಬಾನು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ನಡೆಸಿತು.

Justice S R Krishna Kumar

ಫೆಬ್ರವರಿ 24ರವರೆಗೆ ವಿಧಾನಸೌಧ ಪೊಲೀಸರು ತನಿಖೆಗೆ ಹಾಜರಾಗುವಂತೆ ದಯೀನಾ ಬಾನುಗೆ ಸೂಚಿಸಿಬಾರದು ಎಂದು ಆದೇಶಿಸಿರುವ ನ್ಯಾಯಾಲಯವು ಬಾನು ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಈ ಹಿಂದೆ ಮಾಡಿರುವ ಆದೇಶವನ್ನು ವಿಸ್ತರಿಸಿದೆ.

ಇದಕ್ಕೂ ಮುನ್ನ, ಬಾನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ರಿಜಿಸ್ಟ್ರಾಲ್‌ ಜನರಲ್‌ ಅವರ ಲಿಖಿತ ವರದಿ ಆಧರಿಸಿ ಬಾನು ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ರಿಜಿಸ್ಟ್ರಾರ್‌ ಸಲ್ಲಿಸಿರುವ ಪತ್ರದಲ್ಲಿ ವಂಚನೆ ನಡೆದಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಹೀಗಾಗಿ, ವಂಚನೆ ಆರೋಪಕ್ಕೆ ಎಫ್‌ಐಆರ್‌ ದಾಖಲಿಸುವ ಸಂದರ್ಭ ಉದ್ಭವಿಸುವುದಿಲ್ಲ. ಇದು ಕಾನೂನಿನ ದುರ್ಬಳಕೆಯಾಗಿದ್ದು, ದೂರುದಾರರಾದ ರಿಜಿಸ್ಟ್ರಾರ್‌ ಜನರಲ್‌ ನ್ಯಾಯಾಂಗದ ಅಧಿಕಾರಿ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದೆ. ಬಾನು ಪ್ರಾಕ್ಟೀಸ್‌ ಮಾಡುತ್ತಿರುವ ವಕೀಲೆಯಾಗಿದ್ದಾರೆ. ಇಂಥ ಪ್ರಕರಣದಲ್ಲಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಬೇಕಿತ್ತು" ಎಂದು ವಾದಿಸಿದರು.

ಮುಂದುವರೆದು, "ವಂಚನೆ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಬಿಎನ್‌ಎಸ್‌ಎಸ್‌ ಸೆಕ್ಷನ್‌ 154ರ ಅಡಿ ಅಗತ್ಯತತೆ ಪೂರೈಕೆಯಾಗಿಲ್ಲ. ಯಾಂತ್ರಿಕವಾಗಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಮೊದಲನೇ ಆರೋಪಿಯಾಗಿರುವ ಬಾನು ಹಣ ನೀಡುವಂತೆ ಕಕ್ಷಿದಾರರಿಗೆ ಕೇಳಿಲ್ಲ. ಎರಡನೇ ಆರೋಪಿ ಮರೀನಾ ಫರ್ನಾಂಡೀಸ್‌ ಮತ್ತು ಮೂರನೇ ಆರೋಪಿ ಆರತಿ (ಸಂಧ್ಯಾ) ವಿರುದ್ಧ ಮುಕ್ತ ನ್ಯಾಯಾಲಯದಲ್ಲಿ ಥೆರೆಸಾ ಅವರು ನ್ಯಾಯಮೂರ್ತಿಗಳಿಗೆ ದೂರು ನೀಡಿದ್ದಾರೆ. ವಂಚನೆ ಆರೋಪ ಅಗತ್ಯವಾದ ಅಂಶಗಳು ಇಲ್ಲದ ಹಿನ್ನೆಲೆಯಲ್ಲಿ ಬಾನುರನ್ನು ತನಿಖೆಗೆ ಒಳಪಡಿಸಲಾಗದು. ಹೀಗಾಗಿ ತನಿಖೆಗೆ ತಡೆ ನೀಡಬೇಕು” ಎಂದು ಕೋರಿದರು.

ರಾಜ್ಯ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಬಾನುಳ ಸಂಭಾಷಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಅದನ್ನು ಪರಿಶೀಲಿಸಿ ಪ್ರಕರಣವನ್ನು ನ್ಯಾಯಾಲಯ ನಿರ್ಧರಿಸಬಹುದು. ಬಾನು ಅವರು ಥೆರೆಸಾ ಜೊತೆ ಮಾತನಾಡಿದ್ದಾರೆ. ಮೊಬೈಲ್‌ ಸಂಭಾಷಣೆಯಲ್ಲಿ ಹಲವು ನ್ಯಾಯಮೂರ್ತಿಗಳ ಹೆಸರುಗಳು ಬಂದಿವೆ. ಸಾರ್ವಜನಿಕವಾಗಿ ಅವುಗಳನ್ನು ಹೇಳಲಾಗದು. ಬಾನು ಅವರಿಗೆ ಧ್ವನಿ ಮಾದರಿ ನೀಡಲು ನಿರ್ದೇಶಿಸಬೇಕು. ವಕೀಲರ ಸಮುದಾಯದಲ್ಲಿಯೂ ಕಪ್ಪು ಕುರಿಗಳಿವೆ. ಇಲ್ಲಿ ನ್ಯಾಯಾಂಗದ ಘನತೆಗೆ ಹಾನಿ ಮಾಡುವ ಕೆಲಸವಾಗಿದೆ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಘಟನೆ ನಿಜವೇ ಆದರೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆಯೂ ಅನ್ವಯಿಸುತ್ತದೆ” ಎಂದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಬಾನುರಿಂದ ವೃತ್ತಿ ದುರ್ನಡತೆಯಾಗಿದೆಯೇ, ವಂಚನೆ ನಡೆದಿದೆಯೇ ಎಂಬುದು ಗೊತ್ತಾಗಬೇಕಲ್ಲವೇ? ಸಂಸ್ಥೆಯ ಹಿತಾಸಕ್ತಿ ಕಾಪಾಡುವುದು ಅಂತಿಮ ಉದ್ದೇಶವಾಗಿದೆ. ತನಿಖೆಗೆ ಏಕೆ ಅಡ್ಡ ಬರುತ್ತಿದ್ದೀರಿ? ಮೊಬೈಲ್‌ ಸಂಭಾಷಣೆಯಲ್ಲಿ ಅಗತ್ಯ ಕಂಡುಬಂದರೆ ತನಿಖೆಗೆ ಅನುಮತಿಸಲಾಗುವುದು” ಎಂದಿತು.

ಅಂತಿಮವಾಗಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಸರ್ಕಾರಕ್ಕೆ “ಬಾನು ಅವರಿಂದ ಈಗಾಗಲೇ ದಾಖಲಿಸಿರುವ ಹೇಳಿಕೆ ಮತ್ತು ಮೊಬೈಲ್‌ ಸಂಭಾಷಣೆಯ ಅಂಶಗಳು; ಇದರಲ್ಲಿ ಬಾನು ಅವರು ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರವನ್ನು ತೋರ್ಪಡಿಸಬೇಕು; ನ್ಯಾಯಮೂರ್ತಿಗೆ ಹಣ ನೀಡಲು ವಕೀಲರು ಹಣಕ್ಕೆ ಬೇಡಿಕೆ ಇಡುವುದು ಹೇಗೆ ಅಪರಾಧ ಅಥವಾ ಅಪರಾಧವಲ್ಲ ಎಂಬುದನ್ನು ತೋರಿಸಬೇಕು” ಎಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

ಎಫ್‌ಐಆರ್‌ನಲ್ಲಿ ಏನಿದೆ: ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಿಳಿಸಿರುವಂತೆ ಥೆರೆಸಾ ಅವರ ಪುತ್ರ 24 ವರ್ಷದ ವಿಷ್ಣು ಅಲಿಯಾಸ್‌ ವಿಷ್ಣುದೇವನ್‌ ಅವರು ಮೂರು ವರ್ಷಗಳಿಂದ (ಕೊಲೆ ಆರೋಪದಲ್ಲಿ) ಜೈಲಿನಲ್ಲಿದ್ದು, ಆತನಿಗೆ ಜಾಮೀನು ದೊರಕಿಸಲು ವಕೀಲೆ ಮರೀನಾ ಫರ್ನಾಂಡೀಸ್‌ ₹10 ಲಕ್ಷ ಪಡೆದಿದ್ದರು. ಜಾಮೀನು ಸಿಗದೇ ಇದ್ದುದರಿಂದ ಮರೀನಾ ಫರ್ನಾಂಡೀಸ್‌ ಅವರು ₹9 ಲಕ್ಷಕ್ಕೆ ಮೂರು ಚೆಕ್‌ಗಳನ್ನು ನೀಡಿದ್ದಾರೆ. ಆದರೆ, ಇದುವರೆಗೂ ಹಣ ಹಿಂದಿರುಗಿಸಿಲ್ಲ.

ಮರೀನಾ ಫರ್ನಾಂಡೀಸ್‌ ಅವರು ಆರತಿ ಎಂಬಾಕೆಯನನ್ನು ಪರಿಚಿಸಿದ್ದರು. ಆರತಿಯು ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರು ಪರಿಚಯಿವಿದೆ ಎಂದು ಹೇಳಿಕೊಂಡು ₹72 ಸಾವಿರವನ್ನು ತನ್ನಿಂದ ಪಡೆದುಕೊಂಡಿದ್ದು, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ದಯೀನಾಬಾನು ಅವರು ನ್ಯಾಯಾಧೀಶರು ₹50 ಲಕ್ಷ ನಿರೀಕ್ಷಿಸಿರುತ್ತಾರೆ. ಇಲ್ಲವಾದಲ್ಲಿ ಜಾಮೀನು ಪ್ರಕ್ರಿಯೆಯನ್ನು ಬೇರೆ ವಕೀಲರಲ್ಲಿ ಮಾಡಿಸಿಕೊಳ್ಳುವಂತೆ ಸೂಚಿಸಿರುತ್ತಾರೆ ಎಂದಿದ್ದರು. ಈ ಸಂಬಂಧ ಥೆರೆಸಾ ಅವರು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ಗೆ ಡಿಸೆಂಬರ್‌ 18ರಂದು ದೂರು ನೀಡಿದ್ದರು.

ಸದರಿ ವಿಷಯದ ಕುರಿತು ಸಿಆರ್‌ಎಲ್‌ಪಿ 11259/2024 ದಾಖಲೆಗಳನ್ನು ಪಡೆದು ದಯೀನಾ ಬಾನು ವಿರುದ್ದ ಕ್ರಮಕೈಗೊಳ್ಳುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ಹೈಕೋರ್ಟ್‌ ಕಾನೂನು ಘಟಕದ ಜಂಟಿ ರಿಜಿಸ್ಟ್ರಾರ್‌ ಎಂ ರಾಜೇಶ್ವರಿ ರವರು ವಕೀಲೆ ದಯೀನ್‌ ಬಾನು ಅವರ ಕ್ರಮಕೈಗೊಳ್ಳಲು ವಿಧಾನಸೌಧ ಠಾಣೆಯ ಪೊಲೀಸರಿಗೆ ಡಿಸೆಂಬರ್‌ 20ರಂದು ದೂರು ನೀಡಿದ್ದರು.

ಇದರ ಅನ್ವಯ ದಯೀನಾ ಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 318(4) (ವಂಚನೆ) ಪ್ರಕರಣ ದಾಖಲಿಸಲಾಗಿದೆ.