High Court of Karnataka 
ಸುದ್ದಿಗಳು

ವಂಚನೆ ಪ್ರಕರಣ: ಐಶ್ವರ್ಯಾ ಗೌಡ ದಂಪತಿ ವಿರುದ್ದ ಬಲವಂತದ ಕ್ರಮ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ

ಗೋಲ್ಡ್‌ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಬರಲಿದೆ ಎಂದು 2022ರ ಮಾರ್ಚ್‌ನಿಂದ 2024ರ ಡಿಸೆಂಬರ್‌ವರೆಗೆ ವಿವಿಧ ಹಂತಗಳಲ್ಲಿ ₹2.52 ಕೋಟಿ, 2 ಕೆ.ಜಿ.350 ಗ್ರಾಂ ಚಿನ್ನಾಭರಣ ಪಡೆದಿದ್ದಾರೆ ಎಂದು ಡಾ.ಮಂಜುಳಾ ಎ.ಪಾಟೀಲ್‌ ದೂರಿದ್ದಾರೆ.

Bar & Bench

ಮಾಜಿ ಸಂಸದ ಡಿ ಕೆ ಸುರೇಶ್‌ ಸಹೋದರಿ ಎಂದು ಹೇಳಿಕೊಂಡು ವೈದ್ಯೆಯೊಬ್ಬರ ಬಳಿ ₹2.52 ಕೋಟಿ ಮತ್ತು 2 ಕೆ.ಜಿ. 350 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿ, ಬೆದರಿಕೆ ಹಾಕಿರುವ ಆರೋಪದಡಿ ದಾಖಲಾಗಿರುವ ಎಫ್‌ಐಆರ್‌ ಸಂಬಂಧ ಆರೋಪಿಗಳಾದ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಕೆ ಎನ್‌ ಹರೀಶ್‌ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ರಾಜೇಶ್ವರಿನಗರ ಠಾಣಾ ಪೊಲೀಸರಿಗೆ ಗುರುವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ತಮ್ಮ ವಿರುದ್ಧ ರಾಜರಾಜೇಶ್ವರಿ ಠಾಣೆಯಲ್ಲಿ ದಾಖಲಾಗಿರುವ ಎರಡನೇ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಕೆ ಎನ್‌ ಹರೀಶ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಆದೇಶ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಾದ ಆಲಿಸಿದ ಪೀಠವು ಅರ್ಜಿಯ ಮುಂದಿ‌ನ ವಿಚಾರಣೆವರೆಗೂ ಪೊಲೀಸರು ಅರ್ಜಿದಾರರ ಪರ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿದೆ. ಅಲ್ಲದೆ, ಪ್ರತಿವಾದಿಗಳಾಗಿರುವ ಆರ್‌ ಆರ್‌ ನಗರ ಠಾಣೆಯ ಪೊಲೀಸರು ಮತ್ತು ದೂರುದಾರೆ ಡಾ.ಮಂಜುಳಾ ಎ.ಪಾಟೀಲ್‌ಗೆ ನೋಟಿಸ್‌ ಜಾರಿಗೊಳಿಸಿ, ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.

ಡಾ.ಮಂಜುಳಾ ಎ.ಪಾಟೀಲ್‌ ಅವರು ದೂರು ನೀಡಿ, ಗೋಲ್ಡ್‌ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಬರಲಿದೆ ಎಂದು ತಿಳಿಸಿ 2022ರ ಮಾರ್ಚ್‌ನಿಂದ 2024ರ ಡಿಸೆಂಬರ್‌ವರೆಗೆ ವಿವಿಧ ಹಂತಗಳಲ್ಲಿ ನನ್ನಿಂದ ₹2.52 ಕೋಟಿ ಹಾಗೂ 2 ಕೆ.ಜಿ.350 ಗ್ರಾಂ ಚಿನ್ನಾಭರಣ ಪಡೆದ ಐಶ್ವರ್ಯಾ ಗೌಡ ಮತ್ತು ಆಕೆ ಪತಿ ಹರೀಶ್‌ ನಂತರ ವಾಪಾಸ್‌ ಹಣ ಹಾಗೂ ಚಿನ್ನ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.

ಇದರಿಂದ ಆರ್‌ ಆರ್ ನಗರ ಠಾಣಾ ಪೊಲೀಸರು ಐಶ್ವರ್ಯಾ ಗೌಡ, ಆಕೆಯ ಪತಿ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಬೆದರಿಕೆ ಸೇರಿದಂತೆ ವಿವಿಧ ಆರೋಪಗಳ ಅಡಿ ಎಫ್‌ಐಆರ್‌ ದಾಖಲಿಸಿ, ತನಿಖೆ ಕೈಗೊಂಡಿದ್ದರು. ಇದೀಗ ತಮ್ಮ ವಿರುದ್ಧದ ಎಫ್ಐಆರ್‌ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಹಿಂದೆ ಶಿಲ್ಪಾ ಗೌಡ ಹಾಗೂ ವನಿತಾ ಎಸ್‌. ಐತಾಳ್‌ ಅವರಿಂದ ಕೋಟ್ಯಂತರ ಹಣ ಮತ್ತು ಚಿನ್ನ ಪಡೆದು ವಂಚಿಸಿದ ಆರೋಪ ಸಂಬಂಧ ಚಂದ್ರಾ ಲೇಔಟ್‌ ಮತ್ತು ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಐಶ್ವರ್ಯಾ ಮತ್ತು ಆಕೆಯ ಪತಿಯನ್ನು ಬಿಡುಗಡೆ ಮಾಡಲು ಹೈಕೋರ್ಟ್‌ ಆದೇಶಿಸಿತ್ತು. ಈ ಎರಡೂ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅವು ವಿಚಾರಣೆ ಹಂತದಲ್ಲಿವೆ.