Lawyer Krishnareddy 
ಸುದ್ದಿಗಳು

ಚೆಕ್‌ ಬೌನ್ಸ್‌ ಪ್ರಕರಣ: ವಕೀಲ ಕೃಷ್ಣಾರೆಡ್ಡಿ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಆರೋಪಿ ಮಹಿಳೆ; ಪ್ರಕರಣ ದಾಖಲು

ಕೃಷ್ಣಾರೆಡ್ಡಿ ಅವರು ಹಲಸೂರು ಗೇಟ್‌ ಠಾಣೆಯಲ್ಲಿ ಕಾಂಚನಾ ವಿರುದ್ಧ ದೂರು ನೀಡಿದ್ದು, ಐಪಿಸಿ ಸೆಕ್ಷನ್‌ಗಳಾದ 307, 504, 324 ಅಡಿ ಪ್ರಕರಣ ದಾಖಲಾಗಿದೆ.

Bar & Bench

ಚೆಕ್‌ ಬೌನ್ಸ್‌ ಪ್ರಕರಣದಲ್ಲಿನ ಆರೋಪಿಯೊಬ್ಬರು ಅರ್ಜಿದಾರ ವಕೀಲರ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಆಘಾತಕಾರಿ ಘಟನೆ ಶುಕ್ರವಾರ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನಡೆದಿದೆ. ಆರೋಪಿ ಬೆಂಗಳೂರಿನ ಕಾಂಚನಾ ನಾಚಪ್ಪ ಅವರ ವಿರುದ್ಧ ಹಲಸೂರು ಗೇಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಕೀಲ ಕೃಷ್ಣಾರೆಡ್ಡಿ ಅವರು ದಾಳಿಗೆ ತುತ್ತಾದವರು.

ಬೆಂಗಳೂರಿನ 21ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಭೋಲಾ ಪಂಡಿತ್‌ ಅವರ ಕೋರ್ಟ್‌ನಲ್ಲಿ 4.5 ಲಕ್ಷ ರೂಪಾಯಿ ಚೆಕ್‌ ಬೌನ್ಸ್‌ ಪ್ರಕರಣದ ವಿಚಾರಣೆ ನಡೆಯಿತು. ಕಳೆದ ಮೂರು ವರ್ಷಗಳಿಂದ ಅರ್ಜಿದಾರ ಹರೀಶ್‌ ಅವರಿಂದ ಪಡೆದಿರುವ 4.5 ಲಕ್ಷ ರೂಪಾಯಿ ಮರಳಿಸುವುದಾಗಿ ಹೇಳುತ್ತಾ ಕಾಂಚನಾ ಅವರು ಪ್ರಕರಣ ಮುಂದೂಡಿಕೆ ಪಡೆಯುತ್ತಿದ್ದರು. ಆದರೆ, ಶುಕ್ರವಾರ ಹಣ ಮರಳಿಸಲಾಗದು, ಪ್ರಕರಣವನ್ನು ನಡೆಸುವುದಾಗಿ ಕಾಂಚನಾ ಪರ ವಕೀಲರು ತಿಳಿಸಿದ್ದರು. ಈ ಮಧ್ಯೆ, ಆರೋಪಿ ಕಾಂಚನಾ ನಾಚಪ್ಪ ಅವರ ಪರ ವಕೀಲ ರಾಜಶೇಖರ ಅವರು ಅರ್ಜಿದಾರ ಹರೀಶ್‌ ಅವರ ಪಾಟೀ ಸವಾಲು ನಡೆಸಿದರು.

ವಿಚಾರಣೆಯ ಬಳಿಕ ಕೋರ್ಟ್‌ ಹಾಲ್‌ನಿಂದ ಹೊರಬಂದ ಕಾಂಚನಾ ಅವರು ಮೊದಲಿಗೆ ತಮ್ಮ ವಕೀಲ ರಾಜಶೇಖರ ಅವರ ಜೊತೆ ವಾಗ್ವಾದ ನಡೆಸಿದರು. ಪ್ರಕರಣ ವಿಳಂಬ ಮಾಡಿದ್ದಕ್ಕಾಗಿ ನ್ಯಾಯಾಲಯ ವಿಧಿಸಿದ ದಂಡದ ಮೊತ್ತವನ್ನು ತಾನು ಪಾವತಿಸುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ರಾಜಶೇಖರ ಅವರು ತಾನೇ ದಂಡದ ಮೊತ್ತ ಪಾವತಿಸುವುದಾಗಿ ಹೇಳಿ ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಆನಂತರ ಅರ್ಜಿದಾರ ಹರೀಶ್‌ ಅವರ ವಕೀಲ ಕೃಷ್ಣಾರೆಡ್ಡಿ ಅವರ ಜೊತೆ ವಾಗ್ವಾದಕ್ಕಿಳಿದ ಕಾಂಚನಾ ಅವರು ಮಾತುಕತೆ ಗಂಭೀರ ಸ್ವರೂಪ ಪಡೆದ ಸಂದರ್ಭದಲ್ಲಿ ಏಕಾಏಕಿ ಬ್ಯೂಟಿ ಪಾರ್ಲರ್‌ನಲ್ಲಿ ಬಳಕೆ ಮಾಡಲಾಗುವ ಚಾಕುವಿನಿಂದ ದಾಳಿ ನಡೆಸಿ, ಪರಾರಿಯಾಗಿದ್ದಾರೆ. ಈ ಸಂಬಂಧ ಹಲಸೂರು ಗೇಟ್‌ ಠಾಣೆಯಲ್ಲಿ ಕಾಂಚನಾ ವಿರುದ್ಧ ದೂರು ನೀಡಿದ್ದು, ಐಪಿಸಿ ಸೆಕ್ಷನ್‌ಗಳಾದ 307, 504, 324 ಅಡಿ ಪ್ರಕರಣ ದಾಖಲಾಗಿದೆ ಎಂದು ವಕೀಲ ಕೃಷ್ಣಾರೆಡ್ಡಿ ಅವರು "ಬಾರ್‌ ಅಂಡ್‌ ಬೆಂಚ್‌"ಗೆ ತಿಳಿಸಿದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಪೀಣ್ಯಾ ನಿವಾಸಿಯಾದ ಕಾಂಚನಾ ಅವರಿಗೆ ಜಿಮ್‌ ನಡೆಸುತ್ತಿದ್ದ ಹರೀಶ್‌ ಅವರ ಪರಿಚಯವಾಗಿದ್ದು, ಸಹೋದರನ ವಿವಾಹಕ್ಕಾಗಿ 3 ಲಕ್ಷ ರೂಪಾಯಿ ಹಾಗೂ ಆನಂತರ ಬ್ಯೂಟಿ ಪಾರ್ಲರ್‌ ತೆರೆಯಲು 1.5 ರೂಪಾಯಿ ಸಾಲವನ್ನು 2018ರಲ್ಲಿ ಪಡೆದಿದ್ದರು. ಸಾಕಷ್ಟು ಒತ್ತಾಯದ ಬಳಿಕ 2019ರಲ್ಲಿ ಚೆಕ್‌ ನೀಡಿದ್ದರು. ಇದನ್ನು ನಗದಾಗಿ ಪರಿವರ್ತಿಸಲು ಬ್ಯಾಂಕ್‌ ಮೊರ ಹೋಗಲಾಗಿ, ಚೆಕ್‌ ಬೌನ್ಸ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ವರ್ಗಾವಣೀಯ ಲಿಖಿತಗಳ ಅಧಿನಿಯಮ ಸೆಕ್ಷನ್‌ 138ರ ಪ್ರಕರಣ ದಾಖಲಿಸಲಾಗಿದೆ.