Guruprasad, Director
Guruprasad, Director Instagram
ಸುದ್ದಿಗಳು

ಚೆಕ್‌ ಬೌನ್ಸ್‌ ಪ್ರಕರಣ: ನಿರ್ದೇಶಕ ಗುರುಪ್ರಸಾದ್‌ಗೆ ಜಾಮೀನು ಮಂಜೂರು ಮಾಡಿದ ಬೆಂಗಳೂರು ನ್ಯಾಯಾಲಯ

Bar & Bench

ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಬಂಧಿತರಾಗಿದ್ದ ಸ್ಯಾಂಡಲ್‌ವುಡ್‌ ನಿರ್ದೇಶಕ ಗುರುಪ್ರಸಾದ್‌ ಅವರಿಗೆ ಬೆಂಗಳೂರಿನ ಎಸಿಎಂಎಂ ನ್ಯಾಯಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯವು ಜಾಮೀನುರಹಿತ ವಾರೆಂಟ್‌ ಜಾರಿ ಮಾಡಿದರೂ ಹಾಜರಾಗದ ಹಿನ್ನೆಲೆಯಲ್ಲಿ ಗಿರಿ ನಗರ ಪೊಲೀಸರು ಅವರನ್ನು ಬಂಧಿಸಿ ಬೆಂಗಳೂರಿನ 21ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರಾದ ಎಚ್‌ ಕೆ ರೇಶ್ಮಾ ಅವರ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ಗುರುಪ್ರಸಾದ್‌ಗೆ ಜಾಮೀನು ಮಂಜೂರು ಮಾಡಿತು.

2015ರಲ್ಲಿ ಬೆಂಗಳೂರಿನಲ್ಲಿ ತಮ್ಮ ಮನೆ ಹರಾಜಿಗೆ ಬಂದಿದೆ. ಅದನ್ನು ಬಿಡಿಸಿಕೊಳ್ಳಬೇಕು ಎಂದು ಗೆಳೆಯ ಶ್ರೀನಿವಾಸ್‌ ಅವರ ಬಳಿ ಗುರುಪ್ರಸಾದ್‌ ಅವರು ಚೆಕ್‌ ನೀಡಿ 30 ಲಕ್ಷ ರೂಪಾಯಿ ಸಾಲ ಪಡೆದು ಕೊಂಡಿದ್ದರು. ಇದನ್ನು ಮರಳಿ ಕೇಳಿದಾಗಲೆಲ್ಲಾ ಶ್ರೀನಿವಾಸ್‌ ಅವರನ್ನು ಗುರುಪ್ರಸಾದ್‌ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಬೇಸತ್ತು ಶ್ರೀನಿವಾಸ್‌ ಅವರು ಗಿರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ಜಾಮೀನುರಹಿತ ವಾರೆಂಟ್‌ (ಎನ್‌ಬಿಡಬ್ಲ್ಯು) ಜಾರಿ ಮಾಡಿತ್ತು. ಅದಾಗ್ಯೂ, ಗುರುಪ್ರಸಾದ್‌ ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಗಿರಿನಗರ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇಂದು ನ್ಯಾಯಾಲಯವು ಗುರುಪ್ರಸಾದ್‌ಗೆ ಜಾಮೀನು ಮಂಜೂರು ಮಾಡಿದ್ದು, ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಿದೆ.