M P Kumaraswamy, BJP MLA 
ಸುದ್ದಿಗಳು

ಚೆಕ್‌ ಬೌನ್ಸ್‌ ಪ್ರಕರಣ: ದೂರುದಾರರಿಗೆ ₹1.38 ಕೋಟಿ ಪಾವತಿಸಲು ಬಿಜೆಪಿ ಶಾಸಕ ಕುಮಾರಸ್ವಾಮಿಗೆ ವಿಶೇಷ ನ್ಯಾಯಾಲಯದ ಆದೇಶ

ದೂರುದಾರ ಎಚ್‌ ಆರ್‌ ಹೂವಪ್ಪ ಗೌಡ ಅವರಿಗೆ ಸಾಲದ ಹಣ ಪಾವತಿಸಲು ವಿಫಲವಾದಲ್ಲಿ ಎಂಟು ಪ್ರಕರಣಗಳಲ್ಲಿ ಪ್ರತ್ಯೇಕ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ ನ್ಯಾಯಾಲಯ.

Bar & Bench

ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಬಿಜೆಪಿಯ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ಸೋಮವಾರ ಘೋಷಿಸಿದೆ. ಅಲ್ಲದೇ, ಪ್ರತ್ಯೇಕ ಎಂಟು ಪ್ರಕರಣಗಳಲ್ಲಿ ಒಟ್ಟಾರೆ ₹1.38 ಕೋಟಿಯನ್ನು ದೂರುದಾರರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಪ್ರತಿ ಪ್ರಕರಣಕ್ಕೆ ತಲಾ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶ ಮಾಡಿದೆ.

ಚಿಕ್ಕಮಗಳೂರಿನ ರೈತ ಎಚ್‌ ಆರ್‌ ಹೂವಪ್ಪ ಗೌಡ ಅವರು ವರ್ಗಾವಣೀಯ ಲಿಖಿತಗಳ ಅಧಿನಿಯಮ ಸೆಕ್ಷನ್‌ 138ರ ದೂರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್‌) ನ್ಯಾಯಾಧೀಶೆ ಜೆ ಪ್ರೀತ್‌ ಅವರು ಮಾನ್ಯ ಮಾಡಿದ್ದಾರೆ.

ಪ್ರತ್ಯೇಕ ಆದೇಶದಲ್ಲಿ ₹47.30 ಲಕ್ಷ, ₹2.75 ಲಕ್ಷ, ₹2.25 ಲಕ್ಷ, ₹2.75 ಲಕ್ಷ ₹30.25 ಲಕ್ಷ, ₹2.75 ಲಕ್ಷ, ₹2.30 ಲಕ್ಷ, ₹48.30 ಲಕ್ಷ ಪಾವತಿಸುವಂತೆ ನ್ಯಾಯಾಲಯವು ಕುಮಾರಸ್ವಾಮಿ ಅವರಿಗೆ ಆದೇಶಿಸಿದೆ. ಈ ಪೈಕಿ ಪ್ರತಿ ಪ್ರಕರಣದಲ್ಲಿ ತಲಾ ₹5 ಸಾವಿರ ರೂಪಾಯಿಯಂತೆ ಸರ್ಕಾರಕ್ಕೆ ವೆಚ್ಚದ ರೂಪದಲ್ಲಿ ಒಟ್ಟು ₹40 ಸಾವಿರ ರೂಪಾಯಿ ಪಾವತಿಸಬೇಕು ಎಂದು ನ್ಯಾಯಾಲಯವು ಆದೇಶ ಮಾಡಿದೆ. ಇದರಲ್ಲಿ ಹೂವಪ್ಪ ಗೌಡರಿಗೆ ₹1,38,25,000 ಪಾವತಿಸಬೇಕಿದೆ.

ಪ್ರಕರಣದ ಹಿನ್ನೆಲೆ: ದೂರುದಾರ ಹೂವಪ್ಪ ಗೌಡ ಮತ್ತು ಶಾಸಕ ಕುಮಾರಸ್ವಾಮಿ ಪರಿಚಿತರಾಗಿದ್ದು, ವಿಭಿನ್ನ ದಿನಾಂಕದಂದು ಕುಮಾರಸ್ವಾಮಿ ಅವರು ವೈಯಕ್ತಿಕ ತುರ್ತಿಗಾಗಿ ₹1,66,70,000 ಸಾಲ ಪಡೆದಿದ್ದರು. ಇದಕ್ಕಾಗಿ 08.09.2017 (₹80 ಲಕ್ಷ), 12.09. 2017 (₹85 ಲಕ್ಷ) ಮತ್ತು 15.09.2017 (₹1.7 ಲಕ್ಷ) ಚೆಕ್‌ಗಳನ್ನು ಹೂವಪ್ಪ ಗೌಡರಿಗೆ ನೀಡಿದ್ದರು. ನಿರ್ದಿಷ್ಟ ದಿನಾಂಕದಂದು ನಗದು ಮಾಡಲು ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಿದಾಗ ಅವು ಬೌನ್ಸ್‌ ಆಗಿದ್ದವು. ಹೀಗಾಗಿ, ಹೂವಪ್ಪ ಗೌಡರು ಕುಮಾರಸ್ವಾಮಿ ಅವರಿಗೆ ಡಿಮ್ಯಾಂಡ್‌ ನೋಟಿಸ್‌ ನೀಡಿದ್ದರು. ಆದರೆ, ಹಣ ಹಿಂದಿರುಗಿಸಲು ಸಿದ್ಧವಾಗಿರುವುದಾಗಿ ತಿಳಿಸಿದ್ದರು. ಆದರೆ, ಹಣ ಹಿಂದಿರುಗಿಸಿದ ಹಿನ್ನೆಲೆಯಲ್ಲಿ ಹೂವಪ್ಪಗೌಡರು ಕುಮಾರಸ್ವಾಮಿ ಅವರ ವಿರುದ್ಧ ಮೂರು ಖಾಸಗಿ ದೂರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಮಾಜಿ ಶಾಸಕರಾಗಿದ್ದರು. ಇದೇ ವೇಳೆಗೆ 2018ರ ವಿಧಾನಸಭೆ ಚುನಾವಣೆ ಬಂದ ಹಿನ್ನೆಲೆಯಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಕುಮಾರಸ್ವಾಮಿ ಮುಂದಾಗಿ, ಸದ್ಯ ₹1,40,00,000 ಪಾವತಿಸಲಾಗುವುದು. ಉಳಿದ ಹಣವನ್ನು ಬಳಿಕ ನೀಡುವುದಾಗಿ ಹೇಳಿ ಹಣ ಪಾವತಿ ಮಾಡಿದ್ದರು. ಹೀಗಾಗಿ, ಹೂವಪ್ಪ ಗೌಡರು ತಾವು ಹೂಡಿದ್ದ ದಾವೆಗಳನ್ನು ಹಿಂಪಡೆದಿದ್ದರು.

ಆನಂತರ, ಕುಮಾರಸ್ವಾಮಿ ಅವರು ಹೂವಪ್ಪ ಗೌಡರನ್ನು ಸಂಪರ್ಕಿಸಿ, ತನಗೆ ತುರ್ತಿದ್ದು ₹68,00,000 ಸಾಲ ನೀಡುವಂತೆ ಇದಕ್ಕೆ ಮಾಸಿಕ ಶೇ. 2ರಷ್ಟು ಬಡ್ಡಿ ಪಾವತಿಸುವುದಾಗಿ ಕೋರಿದ್ದರು. ಅಲ್ಲದೇ, ಹಿಂದಿನ ಬಾಕಿ ₹26,70,000 ಪಾವತಿಸುವುದಾಗಿ ತಿಳಿಸಿದ್ದರು. ಇದನ್ನು ನಂಬಿದ ಹೂವಪ್ಪ ಗೌಡರು ₹68,00,000 ಚೆಕ್‌ ಮೂಲಕ ಕುಮಾರಸ್ವಾಮಿಗೆ ಸಂದಾಯ ಮಾಡಿದ್ದರು. ಎರಡು ಬಾಕಿಗಳನ್ನು ಪಾವತಿ ಮಾಡುವಂತೆ ಕುಮಾರಸ್ವಾಮಿಗೆ ಹೂವಪ್ಪ ಗೌಡ ಸೂಚಿಸಿದ್ದ ಹಿನ್ನೆಲೆಯಲ್ಲಿ ಆರೋಪಿ ಶಾಸಕ ₹47 ಲಕ್ಷ, ₹2.50 ಲಕ್ಷ, ₹2 ಲಕ್ಷ, ₹2.50 ಲಕ್ಷ, ₹30 ಲಕ್ಷ, ₹2.5 ಲಕ್ಷ, ₹2 ಲಕ್ಷ, ₹48 ಲಕ್ಷ ಮೊತ್ತ ಉಲ್ಲೇಖಿಸಿ ಪ್ರತ್ಯೇಕವಾಗಿ ಎಂಟು ಚೆಕ್‌ಗಳನ್ನು ವಿಭಿನ್ನ ದಿನಾಂಕ ಉಲ್ಲೇಖಿಸಿ ನೀಡಿದ್ದರು. ಕುಮಾರಸ್ವಾಮಿ ಖಾತೆಯಲ್ಲಿ ಹಣದ ಕೊರತೆಯಾಗಿ ಚೆಕ್‌ಗಳು ಬೌನ್ಸ್‌ ಆಗಿದ್ದವು. ಈ ಹಿನ್ನೆಲೆಯಲ್ಲಿ ಹೂವಪ್ಪ ಗೌಡರು ಪ್ರತ್ಯೇಕವಾಗಿ ಎಂಟು ಪ್ರಕರಣ ದಾಖಲಿಸಿದ್ದರು.