Virtual Hearing 
ಸುದ್ದಿಗಳು

ವರ್ಚುವಲ್ ವಿಚಾರಣೆಯನ್ನು ʼಹಕ್ಕಿನ ವಿಷಯʼವಾಗಿ ಮುಂದುವರೆಸಲು ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಎಐಎಜೆ

ಕೋವಿಡ್-19 ಕಾರಣದಿಂದಾಗಿ ರೂಪುಗೊಂಡ ವಿಡಿಯೊ ಕಾನ್ಫರೆನ್ಸ್ ವಿಚಾರಣೆಗಳು ವಿವಿಧ ಸ್ತರದ ಜನರಿಗೆ ಮತ್ತು ಈ ಹಿಂದೆ ಸುಪ್ರೀಂಕೋರ್ಟ್‌ನಿಂದ ದೂರವೇ ಉಳಿದಿದ್ದ ವಕೀಲರಿಗೆ ನ್ಯಾಯದ ಬಾಗಿಲು ತೆರೆದಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Bar & Bench

ಭೌತಿಕ ವಿಚಾರಣೆ ಆರಂಭವಾದ ಬಳಿಕವೂ ವಿಡಿಯೋ ಕಾನ್ಫರೆನ್ಸ್ ಮೂಲಕ ವಕೀಲರು / ದಾವೆದಾರರು ಸುಪ್ರೀಂ ಕೋರ್ಟ್‌ಗೆ ಹಾಜರಾಗಲು ನೀಡಿರುವ ಆಯ್ಕೆಯನ್ನು ʼಹಕ್ಕಿನ ವಿಷಯʼ ಎಂಬಂತೆ ಮುಂದುವರೆಸಬೇಕೆಂದು ಪ್ರಾರ್ಥಿಸಿ ಸುಪ್ರೀಂಕೋರ್ಟ್‌ಗೆ ಚೆನ್ನೈ ಮೂಲದ ವಕೀಲರ ಸಂಘಟನೆ ʼಆಲ್ ಇಂಡಿಯಾ ಅಸೋಸಿಯೇಷನ್ ​​ಆಫ್ ಜ್ಯೂರಿಸ್ಟ್ಸ್ʼ (ಎಐಎಜೆ) ಅರ್ಜಿ ಸಲ್ಲಿಸಿದೆ.

ಅರ್ಜಿಯು ಪ್ರಮುಖವಾಗಿ ಎರಡು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದಾಗಿ ಸಂವಿಧಾನದ 19 (1) (ಜಿ) ವಿಧಿಯಡಿ ಯಾವುದೇ ವೃತ್ತಿ ಅಭ್ಯಾಸ ಮಾಡುವ ವಕೀಲರ ಮೂಲಭೂತ ಹಕ್ಕನ್ನು ವರ್ಚುವಲ್‌ ವಿಚಾರಣೆ ಹೆಚ್ಚಿಸುತ್ತದೆ. ಎರಡನೆಯದಾಗಿ ಸಂವಿಧಾನದ 21ನೇ ವಿಧಿಯಡಿ ನಾಗರಿಕರಿಗೆ ನ್ಯಾಯ ದೊರಕಿಸಿಕೊಡುವ ಹಕ್ಕನ್ನು ಒದಗಿಸುತ್ತದೆ ಎಂದು ವಕೀಲ ಶ್ರೀರಾಮ್‌ ಪರಾಕ್ಕತ್‌ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಕೋವಿಡ್‌-19 ಕಾರಣದಿಂದಾಗಿ ರೂಪುಗೊಂಡ ವೀಡಿಯೊ ಕಾನ್ಫರೆನ್ಸ್‌ ವಿಚಾರಣೆಗಳು ವಿವಿಧ ಸ್ತರದ ಜನಸಮೂಹಗಳಿಗೆ ಮತ್ತು ಈ ಹಿಂದೆ ದೆಹಲಿಯಲ್ಲಿ ದಾವೆ ಹೂಡುವ ವೆಚ್ಚದ ಕಾರಣಕ್ಕಾಗಿ ಮತ್ತು ಭೌಗೋಳಿಕವಾಗಿ ಸುಪ್ರೀಂಕೋರ್ಟ್‌ನಿಂದ ದೂರವೇ ಉಳಿದಿದ್ದ ವಕೀಲರಿಗೆ ನ್ಯಾಯದ ಬಾಗಿಲು ತೆರೆದಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸಾಂಕ್ರಾಮಿಕದ ನಡುವೆಯೂ, ತಂತ್ರಜ್ಞಾನ ಬಳಸಿ ನ್ಯಾಯಾಲಯವನ್ನು ಕ್ರಿಯಾತ್ಮಕವಾಗಿಟ್ಟ ಸುಪ್ರೀಂಕೋರ್ಟ್‌ ಯತ್ನವನ್ನು ಸಂಘವು ಶ್ಲಾಘಿಸಿದೆ.

ವರ್ಚುವಲ್‌ ವಿಚಾರಣೆಗೆ ಅವಕಾಶ ಇಲ್ಲದೆ ಭೌತಿಕ ಕಲಾಪ ಪುನರಾರಂಭಿಸುವಂತೆ ಸುಪ್ರೀಂಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ತೆಗೆದುಕೊಂಡ ನಿಲುವಿನ ಬಗ್ಗೆ ಸಂಘ ವ್ಯತಿರಿಕ್ತ ಅಭಿಪ್ರಾಯ ಹೊಂದಿದೆ. ಸೀಮಿತ ಹೈಬ್ರಿಡ್‌ ವಿಧಾನದಲ್ಲಿ ಸುಪ್ರೀಂಕೋರ್ಟ್‌ ಮಾರ್ಚ್ 15 ರಿಂದ ಭೌತಿಕ ವಿಚಾರಣೆ ಆರಂಭಿಸಲಿದೆ. ಆದರೆ ಹೈಬ್ರಿಡ್‌ ವ್ಯವಸ್ಥೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕು ಎಂಬುದು ಎಐಎಜೆ ವಾದವಾಗಿದೆ.