actor Jayaprada 
ಸುದ್ದಿಗಳು

ಇಎಸ್ಐ ಬಾಕಿ ಪಾವತಿಸದ ಹಿನ್ನೆಲೆ; ನಟಿ ಜಯಪ್ರದಾಗೆ ಆರು ತಿಂಗಳು ಜೈಲು ಶಿಕ್ಷೆ

ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆಯಡಿ ಹಣ ಪಾವತಿಸಲು ವಿಫಲವಾದ ಕಾರಣಕ್ಕೆ ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ ಅವರಿಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

Bar & Bench

ತನ್ನ ಮಾಲೀಕತ್ವದ ಚಿತ್ರಮಂದಿರದ ಉದ್ಯೋಗಿಗಳಿಗೆ ನೀಡಲು ಬಾಕಿ ಇರುವ ಹಣವನ್ನು ನೌಕರರ ರಾಜ್ಯ ವಿಮಾ ನಿಗಮಕ್ಕೆ (ಇಎಸ್‌ಐಸಿ) ಪಾವತಿಸಬೇಕೆಂಬ ಶಾಸನಬದ್ಧ ಆದೇಶವನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ ನಟಿ ಮತ್ತು ಮಾಜಿ ಸಂಸದೆ ಜಯಪ್ರದಾ ಅವರಿಗೆ ಚೆನ್ನೈನ ನ್ಯಾಯಾಲಯ ಆರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ಇಎಸ್‌ಐಸಿಯ ದೂರನ್ನು ಪರಿಗಣಿಸಿ ಚೆನ್ನೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ತಮ್ಮ ವೇತನದಿಂದ ಇಎಸ್‌ಐ ಮೊತ್ತದ ಕೊಡುಗೆಯನ್ನು ಕಡಿತಗೊಳಿಸಲಾಗಿದ್ದರೂ ಆ ಹಣವನ್ನು ರಾಜ್ಯ ವಿಮಾ ನಿಗಮಕ್ಕೆ ನಿಯಮದ ಪ್ರಕಾರ, ಜಯಪ್ರದಾ ಒಡೆತನದ, ಆದರೆ ಈಗ ನಿಷ್ಕ್ರಿಯಗೊಂಡಿರುವ ಚಿತ್ರ ಮಂದಿರದ ಆಡಳಿತ ವರ್ಗ ಪಾವತಿಸಿಸರಲಿಲ್ಲ ಎಂದು ಇಎಸ್‌ಐಸಿ ದೂರಿತ್ತು.

ಜಯಪ್ರದಾ ಮತ್ತು ಆಕೆಯ ಸಹೋದರರಾದ ರಾಮ್‌ಕುಮಾರ್ ಹಾಗೂ ರಾಜ್ ಬಾಬು ʼಜಯಪ್ರದಾ ಸಿನಿಮಾʼ ಹೆಸರಿನ ಚಿತ್ರಮಂದಿರದದ ಪಾಲುದಾರರಾಗಿದ್ದರು. ಅದು ಸುಮಾರು 10 ವರ್ಷಗಳ ಹಿಂದೆ ಪ್ರದರ್ಶನ ಸ್ಥಗಿತಗೊಳಿಸಿತ್ತು.

ಇಎಸ್‌ಐ ಕಾಯಿದೆಯ ಸೆಕ್ಷನ್ 40ರ ಪ್ರಕಾರ, ಪ್ರಧಾನ ಉದ್ಯೋಗದಾತನು ಉದ್ಯೋಗದಾತರ ಕೊಡುಗೆಯ ಪಾಲನ್ನು ಮತ್ತು ಉದ್ಯೋಗಿಗಳ ಕೊಡುಗೆಯ ಪಾಲನ್ನು ಪಾವತಿಸಬೇಕಾಗುತ್ತದೆ. ಉದ್ಯೋಗಿಗಳ ವೇತನದಿಂದ ಆ ಕೊಡುಗೆಯ ಮೊತ್ತವನ್ನು ವಸೂಲಿ ಮಾಡಲು ಪ್ರಧಾನ ಉದ್ಯೋಗದಾತ ಅರ್ಹನಾಗಿರುತ್ತಾನೆ.

ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆಯು ಪ್ರಾಥಮಿಕವಾಗಿ ಉದ್ಯೋಗಿಗಳ ಪ್ರಯೋಜನಕ್ಕಾಗಿ ಜಾರಿಗೊಳಿಸಲಾದ "ಸಾಮಾಜಿಕ ಕಲ್ಯಾಣ ಶಾಸನದ ಒಂದು ಭಾಗ" ಎಂದು ಹೇಳಿರುವ ನ್ಯಾಯಾಲಯವು ವಿನಾಯತಿ ಕೋರಿದ್ದ ಜಯಪ್ರದಾ ಅವರ ಮನವಿಯನ್ನು ತಿರಸ್ಕರಿಸಿತು.

ಪ್ರಸ್ತುತ ಪ್ರಕರಣ ವಿನಾಯಿತಿ ತೋರಿಸುವ ವರ್ಗಕ್ಕೆ ಬರುವುದಿಲ್ಲ. ಅಂದರೆ ಶಿಕ್ಷೆ ವಿಧಿಸುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಆರೋಪಿಗಳಿಗೆ ಶಿಕ್ಷೆ ಅನುಭವಿಸುವಂತೆ ನಿರ್ದೇಶಿಸಬೇಕು, ಅಪರಾಧದ ಗಂಭೀರ ಸ್ವರೂಪದ್ದಾಗಿರುವುದರಿಂದ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ  ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿ ಸುಂದರಪಾಂಡಿಯನ್ ಹೇಳಿದರು.

ಜಯಪ್ರದಾ ಮತ್ತು ಅವರ ಇಬ್ಬರು ಸಹೋದರರಿಗೆ ತಲಾ ₹ 5,000 ದಂಡ ಪಾವತಿಸುವಂತೆಯೂ ನ್ಯಾಯಾಲು ಸೂಚಿಸಿದೆ.