Chhattisgarh High Court, phone conversation  
ಸುದ್ದಿಗಳು

ಸಮ್ಮತಿಯಿಲ್ಲದೆ ಫೋನ್ ಸಂಭಾಷಣೆ ರೆಕಾರ್ಡ್ ಮಾಡುವುದು ಖಾಸಗಿತನದ ಹಕ್ಕಿನ ಉಲ್ಲಂಘನೆ: ಛತ್ತೀಸ್‌ಗಢ ಹೈಕೋರ್ಟ್

Bar & Bench

ವ್ಯಕ್ತಿಗಳಿಗೆ ಅರಿವಿಲ್ಲದೆ ಮತ್ತು ಅವರ ಒಪ್ಪಿಗೆಯಿಲ್ಲದೆ ಫೋನ್ ಸಂಭಾಷಣೆ  ರೆಕಾರ್ಡ್ ಮಾಡುವುದು ಸಂವಿಧಾನದ 21ನೇ ವಿಧಿಯಡಿ ಪ್ರತಿಪಾದಿಸಿರುವ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಜೀವನಾಂಶ ಕೋರಿದ್ದ ಪ್ರಕರಣದಲ್ಲಿ ಸಾಕ್ಷ್ಯದ ಭಾಗವಾಗಿ ತನ್ನ ಹೆಂಡತಿ ಜೊತೆಗಿನ ಫೋನ್‌ ಸಂಭಾಷಣೆ ದಾಖಲೆಗಳನ್ನು ನೀಡಲು ವ್ಯಕ್ತಿಗೆ ಅನುಮತಿಸಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕುವ ವೇಳೆ ನ್ಯಾಯಮೂರ್ತಿ ರಾಕೇಶ್ ಮೋಹನ್ ಪಾಂಡೆ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ನಿಗೆ ಗೊತ್ತಾಗದಂತೆ ಅಥವಾ ಆಕೆಯ ಒಪ್ಪಿಗೆ ಇಲ್ಲದೆ ಪತಿ ಸಂಭಾಷಣೆಗಳನ್ನು ರೆಕಾರ್ಡ್‌ ಮಾಡಿದರೆ ಅದು ಆಕೆಯ ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್‌ ಹೇಳಿದೆ.  

“ಅರ್ಜಿದಾರೆಯ (ಪತ್ನಿ) ಸಂಭಾಷಣೆಯನ್ನು ಆಕೆಗೆ ತಿಳಿಯದಂತೆ ಪತಿ ರೆಕಾರ್ಡ್‌ ಮಾಡಿದ್ದಾರೆಂದು ತೋರುತ್ತಿದ್ದು ಇದು ಆಕೆಯ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದ. ಜೊತೆಗೆ ಸಂವಿಧಾನದ 21ನೇ ವಿಧಿಯ ಡಿ ಅರ್ಜಿದಾರರಿಗೆ ಒದಗಿಸಲಾಗಿರುವ ಹಕ್ಕನ್ನು ಕಸಿದುಕೊಳ್ಳುತ್ತದೆ” ಎಂದು ನ್ಯಾಯಾಲಯ ತಿಳಿಸಿದೆ.

ಜೀವನಾಂಶ ಕೋರಿ ಪತ್ನಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕ್ರಿಯೆ ನಡೆಯುತ್ತಿರುವಾಗ ತನ್ನ ಹೆಂಡತಿಯೊಂದಿಗಿನ ಸಂಭಾಷಣೆಗಳ ದಾಖಲೆ ಒದಗಿಸಲು ಸಿಆರ್‌ಪಿಸಿ ಸೆಕ್ಷನ್‌ 311ರ ಅಡಿ (ಸಾಕ್ಷಿಗಳಿಗೆ ಸಮನ್ಸ್‌ ನೀಡುವ ಇಲ್ಲವೇ ಹಾಜರಿರುವ ವ್ಯಕ್ತಿಯನ್ನು ವಿಚಾರಣೆಗೊಳಪಡಿಸುವ ಅಧಿಕಾರ) ಪತಿ ಅರ್ಜಿ ಸಲ್ಲಿಸಿದ್ದರು.

ಸಂಭಾಷಣೆಗಳನ್ನು ಸಾಕ್ಷ್ಯವಾಗಿ ಒಪ್ಪಿದ್ದ ಕೌಟುಂಬಿಕ ನ್ಯಾಯಾಲಯ  ಪತಿಯ ಮನವಿಯನ್ನು ಪುರಸ್ಕರಿಸಿತ್ತು. ಈ ಆದೇಶ ರದ್ದುಗೊಳಿಸುವಂತೆ ಕೋರಿ ಪತ್ನಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ವಿವಿಧ ಪ್ರಕರಣಗಳ ತೀರ್ಪುಗಳ ಜೊತೆಗೆ ಪಿಯುಸಿಎಲ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ (ಫೋನ್‌ ಟ್ಯಾಪಿಂಗ್‌ ಪ್ರಕರಣ) ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು ಅವಲಂಬಿಸಿ ಈ ಆದೇಶ ನೀಡಿದೆ. ದೂರವಾಣಿ ಸಂಭಾಷಣೆ ಖಾಸಗಿ ಜೀವನದ ಪ್ರಮುಖ ಅಂಶವಾಗಿದ್ದು ಅನುಮತಿ ಪಡೆಯದೆ ದೂರವಾಣಿ ಸಂಭಾಷಣೆ ದಾಖಲಿಸುವುದು ಸಂವಿಧಾನದ  21ನೇವಿಧಿಯ ಉಲ್ಲಂಘನೆ ಎಂದು ಪಿಯುಸಿಎಲ್‌ ಪ್ರಕರಣ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ ಹೈಕೋರ್ಟ್‌ ಪತ್ನಿಯ ಅರ್ಜಿಯನ್ನು ಪುರಸ್ಕರಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Chhattisgarh_High_Court_order.pdf
Preview