scoop 
ಸುದ್ದಿಗಳು

ನೆಟ್‌ಫ್ಲಿಕ್ಸ್‌ ಸೀರಿಸ್‌ ʼಸ್ಕೂಪ್‌ʼ ವಿರುದ್ಧ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಛೋಟಾ ರಾಜನ್;‌ ₹1 ಪರಿಹಾರ ಕೋರಿಕೆ

ತನ್ನ ಹೆಸರು, ವರ್ಚಸ್ಸು ಮತ್ತು ತಿರುಚಿದ ಧ್ವನಿ ಉಲ್ಲೇಖಿಸಿ ರೂಪಿಸಿರುವ ಸೀರಿಸ್‌ನ ಟ್ರೈಲರ್ ಬಿಡುಗಡೆ ಮಾಡಲಾಗಿದೆ ಎಂದು ತಿಹಾರ್‌ ಜೈಲಿನಲ್ಲಿರುವ ರಾಜನ್‌ನಿಂದ ದಾವೆ ಹೂಡಿಕೆಯಾಗಿದೆ.

Bar & Bench

ತನ್ನ ವ್ಯಕ್ತಿತ್ವ ಹಕ್ಕು ಉಲ್ಲಂಘಿಸುವ ಮೂಲಕ ʼಸ್ಕೂಪ್‌ʼ ಹೆಸರಿನಡಿ ನೆಟ್‌ಫ್ಲಿಕ್ಸ್‌ ವೆಬ್‌ಸರಣಿಯನ್ನು ರೂಪಿಸಿರುವದನ್ನು ಆಕ್ಷೇಪಿಸಿ ಭೂಗತ ಪಾತಕಿ ಛೋಟಾ ರಾಜನ್‌ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದು, ₹1 ಪರಿಹಾರ ಕೋರಿದ್ದಾನೆ.

ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಜಿ ಡಿಗೆ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ನಾಳೆ ನಡೆಸುವ ಸಾಧ್ಯತೆ ಇದೆ. ವೆಬ್‌ಸರಣಿಯ ಟ್ರೈಲರ್‌ನಲ್ಲಿ ಅದರ ನಿರ್ಮಾಪಕರು ತನ್ನ ಹೆಸರು, ಚಿತ್ರ, ತಿರುಚಿದ ಧ್ವನಿ ಬಳಸಿದ್ದು, ತನ್ನ ಹೆಸರಿನ ಜೊತೆ ಇತರರ ಹೆಸರುಗಳನ್ನು ಥಳುಕು ಹಾಕಲಾಗಿದೆ ಎನ್ನುವುದು ತಿಹಾರ್‌ ಜೈಲಿನಲ್ಲಿ ಬಂಧಿಯಾಗಿರುವ ಪಾತಕಿ ರಾಜನ್‌ನ ಆಕ್ಷೇಪ.

ಅಪರಾಧ ಚಟುವಟಿಕೆಗಳ ಖ್ಯಾತ ವರದಿಗಾರ ಜ್ಯೋತಿರ್ಮಯ್‌ ಡೇ ಅವರ ಕೊಲೆಯ ಸುತ್ತ ಸೀರಿಸ್‌ ರೂಪಿಸಲಾಗಿದ್ದು, 2011ರ ಜೂನ್‌ 11ರಂದು ಡೇ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜನ್‌ ಸೇರಿ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ರಾಜನ್‌ ಅಪರಾಧಿ ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿದ್ದ, ಪತ್ರಕರ್ತೆ ಜಿಗ್ನಾ ವೋರಾ ಅವರನ್ನು ಖುಲಾಸೆಗೊಳಿಸಲಾಗಿತ್ತು. ಅವರ ಆತ್ಮಕತೆಯಿಂದ ಪ್ರೇರೇಪಣೆಗೊಂಡು ಸೀರಿಸ್‌ ರೂಪಿಸಲಾಗಿದೆ ಎನ್ನಲಾಗಿದೆ.

ಒಟಿಟಿ ಸೇರಿದಂತೆ ಎಲ್ಲಾ ವೇದಿಕೆಗಳಲ್ಲಿ ಸೀರಿಸ್‌ನ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ಡೇ ಕೊಲೆಯಲ್ಲಿ ತನ್ನನ್ನು ಪ್ರಧಾನ ಪಿತೂರಿಕಾರ ಎಂಬಂತೆ ಬಿಂಬಿಸಲಾಗಿದೆ. ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯು ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದು, ವಿಚಾರಣಾಧೀನ ನ್ಯಾಯಾಲಯದ ಶಿಕ್ಷೆಯನ್ನು ಬಳಕೆ ಮಾಡಬಾರದು ಎಂದು ರಾಜನ್ ವಾದಿಸಿದ್ದಾರೆ.

‌ʼಸ್ಕೂಪ್‌ʼ ಸೀರಿಸ್‌ ಅನ್ನು ತಡೆಯುವಂತೆ ರಾಜನ್‌ ಅವರು ನೆಟ್‌ಫ್ಲಿಕ್ಸ್‌ ಮತ್ತು ಅದರ ನಿರ್ಮಾಪಕರಿಗೆ ಕಾನೂನಾತ್ಮಕವಾಗಿ ನೋಟಿಸ್‌ ಕಳುಹಿಸಿದ್ದಾರೆ. ಇದಕ್ಕೆ ನೆಟ್‌ಫ್ಲಿಕ್ಸ್‌ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ರಾಜನ್‌ ಬಾಂಬೆ ಹೈಕೋರ್ಟ್‌ ಕದತಟ್ಟಿದ್ದಾರೆ.

ಎಲ್ಲಾ ಪೋರ್ಟಲ್‌ಗಳು, ಮನರಂಜನೆ ಮತ್ತು ಸಾಮಾಜಿಕ ಮಾಧ್ಯಮಗಳಿಂದ ವೆಬ್‌ ಸೀರಿಸ್‌ನ ಟ್ರೈಲರ್ ತೆರವು ಮಾಡಬೇಕು. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರಾಜನ್‌ ಹೆಸರು, ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸದಂತೆ ಆದೇಶಿಸಬೇಕು. ಆನ್‌ಲೈನ್‌ ಅಥವಾ ಸಿನಿಮಾ ಮಂದಿರಗಳಲ್ಲಿ ಸೀರಿಸ್‌ ಬಿಡುಗಡೆ ಮಾಡದಂತೆ ನಿರ್ಬಂಧಿಸಬೇಕು. ಸಂದರ್ಶನ ಅಥವಾ ಸಾರ್ವಜನಿಕ ಸಂವಹನದಲ್ಲಿ ರಾಜನ್‌ ಬಗ್ಗೆ ಉಲ್ಲೇಖಿಸದಂತೆ ನಿರ್ಬಂಧಿಸಬೇಕು. ₹1 ರೂಪಾಯಿ ಪರಿಹಾರ ಪಾವತಿಸಲು ಆದೇಶಿಸಬೇಕು ಅಥವಾ ಸೀರಿಸ್‌ ಸಂಪಾದಿಸಿದ ನೈಜ ಹಣಕಾಸಿನ ಬಗ್ಗೆ ಮಾಹಿತಿ ನೀಡಲು ಆದೇಶಿಸಬೇಕು ಎಂದು ಕೋರಲಾಗಿದೆ.