ಸುದ್ದಿಗಳು

ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿಗೆ ಕೊರೊನಾ ದೃಢ

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಿಜೆ ಇಂದ್ರಜಿತ್ ಮಹಾಂತಿಗೆ ಶೀಘ್ರ ಗುಣಮುಖರಾಗುವಂತೆ ಆಶಿಸಿದ್ದಾರೆ.

Bar & Bench

ರಾಜಸ್ಥಾನ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ (ಸಿಜೆ) ಇಂದ್ರಜಿತ್ ಮಹಾಂತಿ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಮಹಾಮಾರಿ ಕೊರೊನಾಗೆ ತುತ್ತಾದ ಮೊದಲ ಸಿಜೆ ಮಹಾಂತಿಯವರು. ಸಿಜೆ ಅವರ ಗಂಟಲ ದ್ರವವನ್ನು ಪರೀಕ್ಷಿಸಿದಾಗ ಅವರಿಗೆ ಕೊರೊನಾ ಇರುವುದು ಶನಿವಾರ ದೃಢಪಟ್ಟಿದೆ.

ಮಹಾಂತಿ ಅವರಿಗೆ ಕೋವಿಡ್ ದೃಢಪಟ್ಟ ವಿಷಯ ತಿಳಿದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಟ್ವಿಟರ್ ನಲ್ಲಿ ಶೀಘ್ರ ಗುಣಮುಖರಾಗುವಂತೆ ಆಶಿಸಿದ್ದಾರೆ.

ಕಳೆದ ತಿಂಗಳಲ್ಲಿ ಹೈಕೋರ್ಟ್ ನ ಹಲವು ಸಿಬ್ಬಂದಿ ಕೊರೊನಾಗೆ ತುತ್ತಾಗಿದ್ದರಿಂದ ನ್ಯಾಯಾಲಯವು ತನ್ನ ಕಾರ್ಯಚಟುವಟಿಕೆಗಳನ್ನು ಸೀಮಿತಗೊಳಿಸಿದೆ. ಜುಲೈನಲ್ಲಿ ಕೋರ್ಟ್ ನ ಸಿಬ್ಬಂದಿಯೊಬ್ಬರಿಗೆ ಕೊರೊನಾ ಇರುವುದು ಪತ್ತೆಯಾಗಿತ್ತು. ಸುರಕ್ಷತೆ ಹಿನ್ನೆಲೆಯಲ್ಲಿ ಕೋರ್ಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಸ್ವಚ್ಛತಾ ಕಾರ್ಯಕೈಗೊಳ್ಳಲಾಗಿತ್ತು. ಸೋಂಕಿತ ಸಿಬ್ಬಂದಿಯು ಹೈಕೋರ್ಟ್‌ ನ ಹಲವು ಸಿಬ್ಬಂದಿಯ ಜೊತೆ ನೇರ ಸಂಪರ್ಕ ಹೊಂದಿದ್ದರು ಎಂದು ಕೋರ್ಟ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಎರಡು ಬಾರಿ ತನ್ನ ಕಾರ್ಯಚಟುವಟಿಕೆಗಳನ್ನು ನಿರ್ಬಂಧಿಸಿ, ಸೋಂಕಿತ ಸಿಬ್ಬಂದಿಯ ಜೊತೆ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ಸೂಚಿಸಿತ್ತು.

ಜೈಪುರ ಹಾಗೂ ಜೋಧಪುರ ನ್ಯಾಯಪೀಠಗಳಲ್ಲಿನ ಸಿಬ್ಬಂದಿಯನ್ನು ಪರೀಕ್ಷೆ ಒಳಪಡಿಸಿದಾಗ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು ಎಂದು ಜುಲೈ 15ರಂದು ಹೈಕೋರ್ಟ್ ಹೇಳಿತ್ತು. ಕಳೆದ ಜೂನ್ ನಲ್ಲಿ ಮದ್ರಾಸ್ ಹೈಕೋರ್ಟ್ ನ ಮೂವರು ನ್ಯಾಯಮೂರ್ತಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದರಿಂದ ನ್ಯಾಯಾಲಯ ತನ್ನ ಕಾರ್ಯಚಟುವಟಿಕೆಗಳಿಗೆ ಮಿತಿ ಹೇರಿತ್ತು.