Pinarayi Vijayan and CJ S Manikumar  Facebook
ಸುದ್ದಿಗಳು

ಮುಖ್ಯ ನ್ಯಾಯಮೂರ್ತಿ- ಸಿಎಂ ಭೇಟಿ: ಸುಳ್ಳುಸುದ್ದಿ ಹರಡಿದ ವಾಹಿನಿಗಳ ವಿರುದ್ಧ ಕೇರಳ ಹೈಕೋರ್ಟ್‌ ಕಿಡಿ

ನ್ಯಾಯಾಧೀಶರಿಗೆ ಲಂಚ ನೀಡಿದ ಆರೋಪದ ಮೇಲೆ ವಕೀಲ ಸಾಯ್ಬಿ ಜೋಸ್ ಕಿದಂಗೂರ್ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿದ್ದವು.

Bar & Bench

ತಮ್ಮ ಮಗಳ ಮದುವೆಗೆ ಆಹ್ವಾನ ನೀಡಲು ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಅವರನ್ನು ಭೇಟಿ ಮಾಡಿದ್ದಾರೆಯೇ ವಿನಾ ಸುದ್ದಿವಾಹಿನಿಗಳು ಬಿಂಬಿಸಿರುವಂತೆ ಅಲ್ಲ ಎಂದು ಕೇರಳ ಹೈಕೋರ್ಟ್ ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಮುಖ್ಯನ್ಯಾಯಮೂರ್ತಿಗಳು ಹಾಗೂ ಮುಖ್ಯಮಂತ್ರಿ ಭೇಟಿ ಕುರಿತಾದ ಸುದ್ದಿ ತುಣುಕುಗಳನ್ನು ವಿವಿಧ ವಾಹಿನಿಗಳು ಪ್ರಸಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕಟಣೆ ನೀಡಲಾಗಿದ್ದು ಸುದ್ದಿ ವಾಸ್ತವಿಕ ಸಂಗತಿಗಳನ್ನು ಆಧರಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ. ಸುದ್ದಿ ಸೃಷ್ಟಿಸಿ ಅದನ್ನು ಸೂಕ್ತ ಸಂದರ್ಭಗಳಿಗೆ ಅಳವಡಿಸುವುದು ನ್ಯಾಯಯುತ ವರದಿ ಎನಿಸಿಕೊಳ್ಳುವುದಿಲ್ಲ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ನ್ಯಾಯಾಧೀಶರಿಗೆ ಲಂಚ ನೀಡಲು ತಮ್ಮ ಕಕ್ಷಿದಾರರಿಂದ ದೊಡ್ಡ ಮೊತ್ತದ ಹಣ ಪಡೆದು ಪಲಾಯನ ಮಾಡಿದ ಆರೋಪದ ಮೇಲೆ ವಕೀಲ ಸಾಯ್ಬಿ ಜೋಸ್‌ ಕಿದಂಗೂರ್‌ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಈ ವರದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿರುವ ಹೈಕೋರ್ಟ್, ಸಭೆಯ ಹಿಂದಿನ ಕಾರಣವನ್ನು ಸ್ಪಷ್ಟಪಡಿಸಿದೆ.

"ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮಗಳ ಮದುವೆಗೆ ಆಹ್ವಾನಿಸಲು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿದ್ದರು. ಮಿಥ್ಯ ಸ್ವರೂಪದ ಕಪೋಲಕಲ್ಪಿತ ವ್ಯಾಖ್ಯಾನಗಳೊಂದಿಗೆ ಸುದ್ದಿ ಪ್ರಸಾರ ಮಾಡಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದೇನೆ" ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ ಎಸ್ ಅರುಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[ಪತ್ರಿಕಾ ಪ್ರಕಟಣೆಯನ್ನು ಇಲ್ಲಿ ಓದಿ]

Press_Release.pdf
Preview