CJI NV Ramana 
ಸುದ್ದಿಗಳು

[ಸಿಜೆಗಳ ಸಮಾವೇಶ] ನಮ್ಮ ನಿರ್ಣಯಗಳನ್ನು ಸರ್ಕಾರದ ಮುಂದಿರಿಸಿ ಒಮ್ಮತಕ್ಕೆ ಪ್ರಯತ್ನಿಸಲಾಗುವುದು: ಸಿಜೆಐ ರಮಣ

ನ್ಯಾಯದಾನಕ್ಕೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಪತ್ತೆ ಹಚ್ಚಿ, ಚರ್ಚಿಸುವ ಗುರಿ ಮತ್ತು ಉದ್ದೇಶ ಹೊಂದಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಅವರು ಸಮಾವೇಶದ ಬಗ್ಗೆ ಬೆಳಕು ಚೆಲ್ಲಿದರು.

Bar & Bench

ನವದೆಹಲಿಯಲ್ಲಿ ನಡೆಯುತ್ತಿರುವ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶದ ನಿರ್ಣಯಗಳನ್ನು ಶನಿವಾರ ನಡೆಯಲಿರುವ ಮುಖ್ಯಮಂತ್ರಿಗಳನ್ನು ಒಳಗೊಂಡ ಜಂಟಿ ಸಮಾವೇಶದಲ್ಲಿ ಸರ್ಕಾರದ ಮುಂದೆ ಇರಿಸಿ ಒಮ್ಮತ ಸಾಧಿಸಲು ಪ್ರಯತ್ನಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಶುಕ್ರವಾರ ಹೇಳಿದ್ದಾರೆ.

ನವದೆಹಲಿಯಲ್ಲಿ ಆಯೋಜಿಸಲಾಗಿರುವ 39ನೇ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಲಯದಲ್ಲಿ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ವೃದ್ಧಿಸುವುದು, ಜಿಲ್ಲಾ ನ್ಯಾಯಾಲಯಗಳಲ್ಲಿ ಮಾನವ ಸಂಪನ್ಮೂಲದ ಅಗತ್ಯ ಪೂರೈಸುವುದು, ಎಲ್ಲವನ್ನೂ ಒಳಗೊಂಡಿರುವ ನ್ಯಾಯಾಂಗ ಮೂಲಸೌಕರ್ಯ, ನ್ಯಾಯಮೂರ್ತಿಗಳ ನೇಮಕ ಮತ್ತು ವೇತನ ಒಳಗೊಂಡ ವಿಚಾರಗಳು ಸಮಾವೇಶದಲ್ಲಿ ಚರ್ಚೆಯಾಗಲಿವೆ ಎಂದರು.

“ನ್ಯಾಯಾಂಗದಲ್ಲಿನ ಖಾಲಿ ಹುದ್ದೆಗಳ ವಿಚಾರವನ್ನು ಉಲ್ಲೇಖಿಸಲು ನಾನು ಬಯಸುತ್ತೇನೆ. ನ್ಯಾಯಾಂಗದಲ್ಲಿನ ಖಾಲಿ ಹುದ್ದೆಗಳನ್ನು ತುಂಬುವುದರ ಕುರಿತು ನನ್ನ ಮೊದಲ ಸಂವಹನವಿತ್ತು” ಎಂದು ನೆನಪಿಸಿದರು.

ಒಂದು ವರ್ಷದ ಒಳಗೆ ಎಲ್ಲರ ಪ್ರಯತ್ನದಿಂದಾಗಿ 126 ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿದೆ. ಇನ್ನೂ 50ಕ್ಕೂ ಹೆಚ್ಚು ನೇಮಕಾತಿಗಳ ನಿರೀಕ್ಷೆ ಹೊಂದಿದ್ದೇವೆ ಎಂದು ವಿವರಿಸಿದರು.

ನ್ಯಾಯದಾನಕ್ಕೆ ಅಡ್ಡಿಯಾಗಿರುವ ಸಮಸ್ಯೆಗಳನ್ನು ಪತ್ತೆ ಹಚ್ಚಿ, ಚರ್ಚಿಸುವುದು ಸಮಾವೇಶದ ಗುರಿ ಮತ್ತು ಉದ್ದೇಶವಾಗಿದೆ. ಕೋವಿಡ್‌ ಸಂದರ್ಭದಲ್ಲಿನ ನಿರ್ವಹಣೆ ಆಡಳಿತಾತ್ಮಕವಾಗಿ ಸವಾಲಿನಿಂದ ಕೂಡಿತ್ತು. ಸಹೋದ್ಯೋಗಿಗಳು, ಅಧಿಕಾರಿಗಳು ಮತ್ತು ರಿಜಿಸ್ಟ್ರಿಯ ಸಿಬ್ಬಂದಿ, ವಕೀಲರು ಮತ್ತು ದಾವೆದಾರರ ಹಿತಕ್ಕಾಗಿ ನಾವು ಸಾಕಷ್ಟು ಹೋರಾಟ ನಡೆಸಿದ್ದೇವೆ. ನಿಮ್ಮದೇ ಹಾದಿಯಲ್ಲಿ ಮಾನವೀಯ ಪ್ರಯತ್ನ ಮಾಡಿದ ನಿಮ್ಮೆಲ್ಲರಿಗೂ ಶುಭ ಕೋರುತ್ತೇನೆ ಎಂದರು.

ಸಮಾವೇಶದಲ್ಲಿ ಈ ಹಿಂದೆ 2016ರಲ್ಲಿ ಕೈಗೊಂಡಿದ್ದ ನಿರ್ಣಯಗಳ ಪ್ರಗತಿಯ ಕುರಿತು ಮುಖ್ಯ ನ್ಯಾಯಮೂರ್ತಿಗಳ ಸಮಾವೇಶದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೇ, ನ್ಯಾಯಾಂಗದ ಸುಧಾರಣೆಯ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಾದ ಯು ಯು ಲಲಿತ್‌ ಮತ್ತು ಎ ಎಂ ಖಾನ್ವಿಲ್ಕರ್‌ ಭಾಗವಹಿಸಿದ್ದಾರೆ.

ದೆಹಲಿಯ ವಿಗ್ಯಾನ್‌ ಭವನದಲ್ಲಿ ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮಾವೇಶ ಶನಿವಾರ ನಡೆಯಲಿದೆ. ಆರು ವರ್ಷಗಳ ಬಳಿಕ ನಡೆಯಲಿರುವ ಈ ಸಮಾವೇಶವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.