ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಬೃಹತ್ ಕೈಗಾರಿಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣದ ಮರುತನಿಖೆ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಬುಧವಾರ ಸಮ್ಮತಿಸಿದೆ. ಆದರೆ ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ದೂರನ್ನು ಪುನಾರಂಭಿಸಲು ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ ಅದೇಶಕ್ಕೆ ತಡೆ ನೀಡಲು ನಿರಾಕರಿಸಿದೆ.
ಹೈಕೋರ್ಟ್ ಆದೇಶದ ಅನುಸಾರ ಒಮ್ಮೆ ವಿಚಾರವನ್ನು ಗಣನೆಗೆ ತೆಗೆದುಕೊಂಡರೆ ಮುಖ್ಯಮಂತ್ರಿ ವಿರುದ್ಧ ವಾರೆಂಟ್ ಜಾರಿಗೊಳಿಸುತ್ತಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರನ್ನು ಬಂಧಿಸದಂತೆ ರಕ್ಷಣೆ ನೀಡಬೇಕು ಎಂದು ಯಡಿಯೂರಪ್ಪ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಿಚಾರಣೆ ವೇಳೆ ಕೋರಿದರು.
ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠವು “ನೀವು ಹಾಲಿ ಮುಖ್ಯಮಂತ್ರಿ. ನಿಮ್ಮ ವಿರುದ್ಧ ಯಾರು ವಾರಂಟ್ ಜಾರಿಗೊಳಿಸುತ್ತಾರೆ. ಮುಖ್ಯಮಂತ್ರಿ ವಿರುದ್ಧ ಕೋರಿಕೆ ಮನವಿಯನ್ನು ನೀಡಲಾಗುತ್ತದೆಯೇ ವಿನಾ ವಾರೆಂಟ್ ಜಾರಿ ಮಾಡುವುದಿಲ್ಲ” ಎಂದಿತು.
ಘಟನೆಯ ಹಿನ್ನೆಲೆ: 2010ರಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಪಾಶ್ ಸ್ಪೇಸ್ ಇಂಟರ್‌ನ್ಯಾಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಆಲಂ ಪಾಷಾ ಅವರು ಸಲ್ಲಿಸಿದ್ದ 600 ಕೋಟಿ ರೂಪಾಯಿ ವೆಚ್ಚದ ಗೃಹ ನಿರ್ಮಾಣ ಯೋಜನೆಗಾಗಿ 26 ಎಕರೆ ಭೂಮಿ ಮಂಜೂರು ಮಾಡಲು ಅನುಮೋದನೆ ನೀಡಲಾಗಿತ್ತು. ಆದರೆ, 2011ರ ಮಾರ್ಚ್‌ನಲ್ಲಿ ಅದನ್ನು ರದ್ದುಪಡಿಸಲಾಗಿತ್ತು.
ಉನ್ನತ ಮಟ್ಟದ ಸಮಿತಿಯು ಬೆಂಗಳೂರಿನ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪಾಷಾ ಅವರಿಗೆ ಮಂಜೂರು ಮಾಡಿದ್ದ 26 ಎಕರೆ ಭೂಮಿಯ ಒಪ್ಪಂದವನ್ನು ಪಾಷಾ ಅವರು ನಕಲಿ ದಾಖಲೆ ನೀಡಿದ್ದಾರೆ ಎಂದು ಯಡಿಯೂರಪ್ಪ ಮತ್ತುಇತರರು ಕ್ರಿಮಿನಲ್ ಪಿತೂರಿ ನಡೆಸಿ ಅನುಮೋದನೆ ಹಿಂಪಡೆದಿದ್ದರು ಎಂದು ಆರೋಪಿಸಲಾಗಿದೆ.
2012ರಲ್ಲಿ ಪಾಷಾ ಸಲ್ಲಿಸಿದ್ದ ಖಾಸಗಿ ದೂರನ್ನು ಲೋಕಾಯುಕ್ತ ಪೊಲೀಸ್‌ಗೆ ವರ್ಗಾಯಿಸಲಾಗಿತ್ತು. 2013ರಲ್ಲಿ ಈ ಸಂಬಂಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ತಮ್ಮ ವಿರುದ್ಧದ ಪ್ರಕರಣದ ತನಿಖೆ ನಡೆಸಲು ಪೊಲೀಸರು ಅನುಮತಿ ಪಡೆದಿರಲಿಲ್ಲ ಎಂದು ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಮನ್ನಿಸಿದ್ದ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ನೂತನ ಪಿಸಿಆರ್ ದಾಖಲಿಸಲಾಗಿತ್ತು. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದಿರುವುದರಿಂದ ಯಾವುದೇ ಅನುಮತಿಯ ಅಗತ್ಯವಿಲ್ಲ ಎಂದು ಹೇಳಲಾಗಿತ್ತು. ಹಿಂದಿನ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ತನಿಖೆಗೆ ಒಳಪಡಿಸಲು ಅನುಮತಿ ಅಗತ್ಯ ಎಂಬ ಹಿನ್ನೆಲೆಯಲ್ಲಿ ಅದನ್ನು ಹೈಕೋರ್ಟ್ ವಜಾಗೊಳಿಸಿತ್ತು ಎನ್ನುವ ಅಂಶವನ್ನು ಆಧರಿಸಿ 2016ರಲ್ಲಿ ವಿಶೇಷ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿತ್ತು.
ಇದರಿಂದ ನೊಂದ ಅರ್ಜಿದಾರರು ಅವರು ಅಧೀನ ನ್ಯಾಯಾಲಯದ ಆದೇಶ ವಜಾಗೊಳಿಸಬೇಕು ಹಾಗೂ ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಪ್ರಕರಣವನ್ನು ಪುನಾರಂಭಿಸಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಅಪರಾಧ ನಡೆದಿದೆ ಎನ್ನಲಾದ ಸಂದರ್ಭದಲ್ಲಿ ಆರೋಪಿಯು ತಮ್ಮ ಸ್ಥಾನವನ್ನು ದುರುಪಯೋಗ ಪಡೆಸಿಕೊಂಡಿರುವುದರಿಂದ ಮತ್ತು ಅವರು ಈಗಾಗಲೇ ಸ್ಥಾನ ತೊರೆದಿರುವುದರಿಂದ ಪ್ರತಿವಾದಿಯನ್ನು ವಿಚಾರಣೆಗೆ ಒಳಪಡಿಸುವ ಸಂಬಂಧ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದ್ದ ಕರ್ನಾಟಕ ಹೈಕೋರ್ಟ್ 2016ರಲ್ಲಿ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಬದಿಗೆ ಸರಿಸಿ, ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಪ್ರಕರಣವನ್ನು ಪುನಾರಂಭಿಸಲು ಅನುಮತಿಸಿತ್ತು. ಈ ವೇಳೆ ಅದು ಸ್ಟೇಷನ್ ಹೌಸ್ ಆಫೀಸರ್, ಸಿಬಿಐ/ಎಸಿಬಿ/ಬೆಂಗಳೂರು ವರ್ಸಸ್ ಬಿ ಎ ಶ್ರೀನಿವಾಸನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಆಧರಿಸಿ ಆದೇಶ ಹೊರಡಿಸಿತ್ತು.