ಸಮಾಜ ಕಲ್ಯಾಣದ ದೃಷ್ಟಿಯಿಂದ ರೂಪಿಸಲಾದ ಶಾಸನಾತ್ಮಕ ನಿಬಂಧನೆಗಳನ್ನು ವಿವೇಚನಾಧಿಕಾರವಾಗಿ ಪರಿವರ್ತಿಸಲಾಗದು ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್ ಆಡಳಿತಾತ್ಮಕ ಕಾರಣಗಳು, ಮಾನವ ಸಂಪನ್ಮೂಲದ ಕೊರತೆಯ ಕಾರಣ ನೀಡಿ ಮಗುವಿನ ಆರೈಕೆ ರಜೆ (ಸಿಸಿಎಲ್) ನಿರಾಕರಿಸಿದ್ದ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.
ಮಗುವಿನ ಹತ್ತನೇ ತರಗತಿಯ ಪರೀಕ್ಷೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ತಾಯಿಯು ಕೋರಿದ್ದ ರಜೆಯ ಬೇಡಿಕೆಯನ್ನು ಮನ್ನಿಸಿರುವ ಕರ್ನಾಟಕ ಹೈಕೋರ್ಟ್, ಮಕ್ಕಳ ಆರೈಕೆ ರಜೆಯನ್ನು ನೀಡುವ ವೇಳೆ ಮಕ್ಕಳ ಹಿತಾಸಕ್ತಿಯನ್ನು ಪ್ರಮುಖವಾಗಿ ಪರಿಗಣಿಸಿ ಉದಾರವಾಗಿಯೂ, ಪ್ರಾಯೋಗಿಕವಾಗಿಯೂ ಅದನ್ನು ನೀಡಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದೆ.
ಕೇಂದ್ರ ಸರ್ಕಾರದ ಸೆಂಟರ್ ಫಾರ್ ಡೆವಲಪಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್‌ನಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ವಡ್ಡೆ ಅವರಿಗೆ ತಮ್ಮ ಮಗುವಿನ ಹತ್ತನೇ ತರಗತಿಯ ಪರೀಕ್ಷೆಯ ಹಿನ್ನೆಲೆಯಲ್ಲಿ ಫೆ.6 ರಿಂದ ಮೇ.20 ರವರೆಗೆ ಮಗುವಿನ ಆರೈಕೆ ರಜೆ ಹೈಕೋರ್ಟ್ ನಿರ್ದೇಶಿಸಿತು.
ಉದ್ಯೋಗಿ ತಾಯಿಯ ರಜೆಯ ಕೋರಿಕೆಯನ್ನು ಈ ಹಿಂದೆ ಪುರಸ್ಕರಿಸಿದ್ದ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಫೆ.5ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ.ಎಸ್ ಜಿ ಪಂಡಿತ್ ಹಾಗೂ ನ್ಯಾ.ಕೆ ವಿ ಅರವಿಂದ್ ಅವರಿದ್ದ ಹೈಕೋರ್ಟ್ ವಿಭಾಗೀಯಪೀಠ ವಜಾಗೊಳಿಸಿತು.
ಮಕ್ಕಳ ಆರೈಕೆ ರಜೆಯನ್ನು ಜಾರಿಗೊಳಿಸಿರುವ ಉದ್ದೇಶವು ಕೇವಲ ಏಕ ಪೋಷಕ ಸರ್ಕಾರಿ ನೌಕರರಾದ ತಾಯಿ/ತಂದೆಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಮಾತ್ರವೇ ಹೊಂದಿಲ್ಲದೆ, ಅದಕ್ಕೂ ಮಿಗಿಲಾಗಿ ಮಗುವಿನ ಹಕ್ಕುಗಳನ್ನು ಗಮನದಲ್ಲಿರಿಸಿಕೊಂಡು ರೂಪಿಸಿರುವಂತದ್ದಾಗಿದೆ. ಆಡಳಿತ ನೀತಿ ನಿರೂಪಣೆಯ ವಿಚಾರದಲ್ಲಿನ ನಿರ್ದೇಶಕ ತತ್ವಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರೂಪಿಸಲಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ಸಿಸಿಎಲ್ ರಜೆಗಾಗಿ ಉದ್ಯೋಗಿ ತಾಯಿಯು ಮಗುವಿನ ಹತ್ತನೇ ತರಗತಿಯ ಪರೀಕ್ಷೆಯ ಕಾರಣ ನೀಡಿದ್ದನ್ನು "ಕ್ಷುಲ್ಲಕ" ಎಂದು ಹೇಳಿ ನಿರಾಕರಿಸಿದ್ದನ್ನು ಹೈಕೋರ್ಟ್ ತೀವ್ರವಾಗಿ ಖಂಡಿಸಿದೆ.
ಮಕ್ಕಳ ವಿಕಸನದಲ್ಲಿ ಶಿಕ್ಷಣವು ವಿಶೇಷ ಪಾತ್ರವನ್ನು ವಹಿಸುತ್ತದೆ. ಶಿಕ್ಷಣವು ಮಗುವಿಗೆ ಅತ್ಯಗತ್ಯವಾಗಿದೆ. ಹತ್ತು ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗಳು ಜೀವನದ/ಉದ್ಯೋಗದ ದೃಷ್ಟಿಯಿಂದ ತಿವ್ರ ಸ್ಪರ್ಧಾತ್ಮಕತೆಯನ್ನು ಹೊಂದಿದ್ದು, ಮಕ್ಕಳಲ್ಲಿ ಒತ್ತಡ, ತಳಮಳವನ್ನು ಸೃಷ್ಟಿಸುತ್ತವೆ. ಇಂತಹ ಸಂದರ್ಭದಲ್ಲಿ ತಮ್ಮ ಮಾನಸಿಕ ಅವಲಂಬನೆಗಾಗಿ, ಒತ್ತಡ ನಿರ್ವಹಣೆಗಾಗಿ ಮಕ್ಕಳು ಕುಟುಂಬದ ಬೆಂಬಲವನ್ನು ನಿರೀಕ್ಷಿಸುತ್ತಾರೆ. ಇದು ಆರೋಗ್ಯದ ದೃಷ್ಟಿಯಿಂದ ಸುಸ್ಥಿರ ವಾತಾವರಣವನ್ನು ಸೃಷ್ಟಿಸುತ್ತದೆ. ಹಾಗಾಗಿ, ಪರೀಕ್ಷಾ ಹಿನ್ನೆಲೆಯಲ್ಲಿ ರಜೆಯ ಕೋರಿಕೆಯನ್ನು ಕ್ಷುಲ್ಲವೆಂದು ತಿರಸ್ಕರಿಸಲಾಗದು ಎಂದು ಪೀಠವು ತನ್ನ ಆದೇಶದಲ್ಲಿ ವಿವರಿಸಿದೆ.
ಇದೇ ವೇಳೆ ನ್ಯಾಯಾಲಯವು, ಮಕ್ಕಳ ಆರೈಕೆ ರಜೆಯಂತಹ ಅವಕಾಶಗಳನ್ನು ಕಲ್ಪಿಸಿರುವುದರ ಉದ್ದೇಶವನ್ನು ಅಲ್ಲಗಳೆಯುವಂತೆ ರಜೆಯನ್ನು ನಿರಾಕರಿಸಲು ಮಾನವ ಸಂಪನ್ಮೂಲದ ಕೊರತೆಯನ್ನು ಮುಂದುಬಾಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿತು. ಶಾಸನಾತ್ಮಕವಾದ ರಜೆಯ ಅನುಕೂಲಗಳನ್ನು ಪಡೆಯಲು ಸಮರ್ಥ ಉದ್ಯೋಗ ವೃಂದವನ್ನು ಹೊಂದುವುದು, ವ್ಯವಸ್ಥಿತವಾದ ನೇಮಕಾತಿ ವಿಧಾನವನ್ನು ಅಳವಡಿಸಿಕೊಳ್ಳುವುದು ಅಗತ್ಯವೆಂದು ಬುದ್ದಿವಾದ ಹೇಳಿತು.
ಸಿಬ್ಬಂದಿಯ ಕೊರತೆಯಂತಹ ನ್ಯಾಯಯುತವಲ್ಲದ ಕಾರಣಗಳನ್ನು ನೀಡಿ ಯಾವುದೇ ಅನುಕೂಲಕರ ಶಾಸನವನ್ನು ತಿರಸ್ಕರಿಸಲಾಗದು. ರಜೆಯ ವಿಚಾರದಲ್ಲಿ ನಿರ್ಣಯವು ಉದ್ಯೋಗದಾತರ ನಿರ್ಧಾರದ ಮೇಲೆ ಅವಲಂಬಿತವಾದರೂ ಪ್ರಸಕ್ತ ಪ್ರಕರಣದಲ್ಲಿ ಅರ್ಜಿದಾರರು ನೀಡಿರುವ ಕಾರಣಗಳು, ವಿಶೇಷವಾಗಿ ಮಗು ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಪರೀಕ್ಷಾ ತಯ್ಯಾರಿಯಲ್ಲಿ ತೊಡಗಿರುವುದನ್ನು ವಿವರಿಸಿರುವುದು ಕೋರಿಕೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಬೇಕಾದ ಅಗತ್ಯವನ್ನು ಸೂಚಿಸುತ್ತದೆ ಎಂದಿತು.
ಮುಂದುವರೆದು, "ಸಮಾಜ ಕಲ್ಯಾಣದ ದೃಷ್ಟಿಯಿಂದ ರೂಪಿಸಲಾದ ಶಾಸನಾತ್ಮಕ ನಿಬಂಧನೆಯನ್ನು ವಿವೇಚನಾಧಿಕಾರದ ಹಕ್ಕಿಗೆ ಒಳಪಡಿಸಿ ಪರಿವರ್ತಿಸಲಾಗದು" ಎಂದು ಸ್ಪಷ್ಟಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ್ದ ವಕೀಲ ಕೆ ಸತೀಶ್ ಭಟ್, ‘‘ಅಡ್ವಾನ್ಸಿಂಗ್ ಕಂಪ್ಯೂಟಿಂಗ್ ಕೇಂದ್ರದ ಉದ್ಯೋಗಿಯಾಗಿರುವ ಅರ್ಜಿದಾರರು 5 ತಿಂಗಳು ಸಿಸಿಎಲ್ ರಜೆ ಕೋರಿದರೆ 18 ದಿನಗಳ ರಜೆ ಮಾತ್ರ ನೀಡಿದ್ದಾರೆ.ಇದು ಕೇಂದ್ರೀಯ ನಾಗರಿಕ ಸೇವಾ ರಜೆ ನಿಯಮ 43ಸಿ ಉಲ್ಲಂಘನೆಯಾಗಿದೆ ಮತ್ತು ಅರ್ಜಿದಾರರ ಹಕ್ಕಿಗೆ ಧಕ್ಕೆಯಾಗಿದೆ. ಸದ್ಯ ಪರೀಕ್ಷೆ ನಡೆಯುತ್ತಿರುವುದರಿಂದ ಅರ್ಜಿದಾರರು ರಜೆಯ ಕಾರಣಕ್ಕೆ ಒತ್ತಡದಲ್ಲಿದ್ದಾರೆ’’ ಎಂದರು.
ಅಲ್ಲದೆ, ಅಪ್ರಾಪ್ತ ಮಕ್ಕಳ ಹಕ್ಕು ರಕ್ಷಿಸಲು ಈ ನಿಯಮವನ್ನು ರೂಪಿಸಲಾಗಿದೆ. ಮಗುವಿನ ಅಭಿವೃದ್ದಿಗೆ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಫೆ.6 ರಿಂದ ಮೇ.20ರವರೆಗೆ ರಜೆ ನೀಡಲು ಸಿಎಟಿ ಆದೇಶಿಸಿತ್ತು ಎಂದು ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ: ಕೇಂದ್ರ ಸರಕಾರಿ ನಿಯಮದಲ್ಲಿ ಅಪ್ರಾಪ್ತ ಮಕ್ಕಳ ಆರೈಕೆಗಾಗಿ ಸೇವಾವಧಿಯಲ್ಲಿ 730 ದಿನ ಸಿಸಿಎಲ್ ರಜೆ ಪಡೆಯಲು ಮಹಿಳಾ ಉದ್ಯೋಗಿ ಮತ್ತು ಏಕ ಪೋಷಕರಾದ ಪುರುಷ ಉದ್ಯೋಗಿಗೆ ಅವಕಾಶವಿದೆ. ಅದರಂತೆ ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಡಾಕ್‌ನಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ವಡ್ಡೆ ಮಗನ 10ನೇ ತರಗತಿ ಪರೀಕ್ಷೆಗೆ ನೆರವಾಗಲು 5 ತಿಂಗಳು ಸಿಸಿಎಲ್ ರಜೆ ಕೋರಿದ್ದರು. ಆದರೆ ಅದನ್ನು ನಿರಾಕರಿಸಿ ಕೇವಲ 18 ದಿನ ಮಾತ್ರ ರಜೆ ನೀಡಲಾಗಿತ್ತು. ಅದನ್ನು ಅವರು ಸಿಎಟಿಯಲ್ಲಿ ಪ್ರಶ್ನಿಸಿದ್ದರು. ಸಿಎಟಿ ರಜೆ ನೀಡಲು ಆದೇಶಿಸಿತ್ತು. ಇದರ ವಿರುದ್ಧ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು.