ಸುದ್ದಿಗಳು

ಇಬ್ಬರೂ ಪೋಷಕರ ಪ್ರೀತಿ- ವಾತ್ಸಲ್ಯ ಪಡೆಯುವ ಹಕ್ಕು ಮಗುವಿಗೆ ಇದೆ: ಸುಪ್ರೀಂ ಕೋರ್ಟ್

Bar & Bench

ತಂದೆ-ತಾಯಿ ಇಬ್ಬರ ಪ್ರೀತಿ- ವಾತ್ಸಲ್ಯ ಪಡೆಯುವ ಹಾಗೂ ಇಬ್ಬರ ಬಳಿಯೂ ಇರುವ ಹಕ್ಕು ಮಗುವಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಪುನರುಚ್ಛರಿಸಿದೆ. [ಹಿಮಾಂಶು ಚೋರ್ಡಿಯಾ ಮತ್ತು ಆರುಷಿ ಜೈನ್‌ ನಡುವಣ ಪ್ರಕರಣ].

ತಂದೆ ತಾಯಿ ಇದ್ದಾಗ ಮಕ್ಕಳು ಹೆಚ್ಚು ಖುಷಿಯಿಂದ ಇರುತ್ತಾರೆ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ತಿಳಿಸಿತು.

ತನ್ನ ಮಗನನ್ನು ಮಧ್ಯಂತರ ಸುಪರ್ದಿಗೆ ಒಪ್ಪಿಸಬೇಕು ಎಂದು ತಂದೆಯೊಬ್ಬರು ಸಲ್ಲಿಸಿದ್ದ ಮನವಿಯನ್ನು ರಾಜಸ್ಥಾನ ಹೈಕೋರ್ಟ್‌ ನಿರಾಕರಿಸಿತ್ತು. ಕೋವಿಡ್‌ ಕಾರಣಕ್ಕೆ ಈ ಆದೇಶ ನೀಡಲಾಗಿತ್ತು.ಬಳಿಕ ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ರಾಜಿ ಸಂಧಾನಕ್ಕಾಗಿ ಇಬ್ಬರೂ ಕಕ್ಷಿದಾರರನ್ನು ಸುಪ್ರೀಂ ಕೋರ್ಟ್‌ ಮಧ್ಯಸ್ಥಿಕೆ ಕೇಂದ್ರಕ್ಕೆ ತೆರಳುವಂತೆ ಹಿಂದಿನ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ತಿಳಿಸಿತ್ತು. ಅಲ್ಲದೆ ಮಗನೊಂದಿಗೆ ಹೋಳಿ ಆಚರಿಸಲು ತಂದೆ ಉದಯಪುರದ ಹೋಟೆಲ್‌ನಲ್ಲಿ ಉಳಿಯಲು ಅವಕಾಶ ನೀಡಿತ್ತು. ಬಳಿಕ ಮಗನನ್ನು ತಾಯಿಯ ಸುಪರ್ದಿಗೆ ಒಪ್ಪಿಸುವಂತೆ ಸೂಚಿಸಿತ್ತು. ನ್ಯಾಯಾಲಯದ ಆದೇಶದಂತೆ ಮಗುವಿನೊಂದಿಗೆ ವಾರಾಂತ್ಯದ ಎರಡು ದಿನಗಳನ್ನು ತಂದೆ ಮಗುವಿನ ಜೊತೆ ಕಳೆದಿದ್ದರು.

ಮಗು ತನ್ನೊಂದಿಗೆ ಖುಷಿಯಾಗಿರುವ ಛಾಯಾಚಿತ್ರಗಳನ್ನು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇಂಥದ್ದೇ ಛಾಯಾಚಿತ್ರಗಳನ್ನು ಮಗುವಿನ ಅಮ್ಮ ಕೂಡ ನ್ಯಾಯಾಲಯಕ್ಕೆ ಸಲ್ಲಿಸಬಲ್ಲರು ಎಂದು ತಾಯಿಯ ಕಡೆಯ ವಕೀಲರು ವಾದಿಸಿದ್ದರು. ಆಗ ನ್ಯಾಯಾಲಯ ಮಗುವಿಗೆ ಪೋಷಕರಿಬ್ಬರ ಅಗತ್ಯವಿದೆ ಎಂದು ಹೇಳಿತ್ತು. ದುರದೃಷ್ಟವಶಾತ್‌ ಪೋಷಕರು ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆಯಲಿಲ್ಲ.

ಮಗ ಒಪ್ಪಿದರೆ ಆತನ ಹುಟ್ಟುಹಬ್ಬದ ದಿನ ಹಾಗೂ ಬೇಸಿಗೆಯ ರಜೆ ದಿನಗಳನ್ನು ತಂದೆ ಮಗನೊಟ್ಟಿಗೆ ಕಳೆಯಬಹುದು ಎಂದು ವಿಚಾರಣೆ ವೇಳೆ ನ್ಯಾಯಾಲಯ ತಿಳಿಸಿದೆ. “ಮಗುವಿನ ಮೇಲೆ ಯಾವುದೇ ಒತ್ತಡ ಹಾಕುವಂತಿಲ್ಲ. ಕೋವಿಡ್‌ ಪರಿಸ್ಥಿತಿ ಸುಧಾರಿಸುತ್ತಿದ್ದು ಜೀವನ ಬಹುತೇಕ ಸಹಜ ಸ್ಥಿತಿಗೆ ತಲುಪಿದೆ. ಪಕ್ಷಕಾರರು ಭವಿಷ್ಯದಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿ ಮಗುವಿನ ಸುಪರ್ದಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ಪಡೆಯಬಹುದು” ಎಂದು ನ್ಯಾಯಾಲಯ ವಿವರಿಸಿತು.

ಸುಪ್ರೀಂ ಕೋರ್ಟ್‌ ಕರ್ನಾಟಕ ಹೈಕೋರ್ಟ್‌, ಸೇರಿದಂತೆ ದೇಶದ ವಿವಿಧ ನ್ಯಾಯಾಲಯಗಳು ಇಂಥದ್ದೇ ತೀರ್ಪನ್ನು ಈಗಾಗಲೇ ನೀಡಿವೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Himanshu_Chordia_vs_Arushi_Jain.pdf
Preview