Child Marriage 
ಸುದ್ದಿಗಳು

ಬಾಲ್ಯ ವಿವಾಹ ನಿಷೇಧ ಫಲಕಗಳನ್ನು ದೇವಾಲಯ, ಕಲ್ಯಾಣ ಮಂಟಪಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು: ಹೈಕೋರ್ಟ್

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ 2012 (ಪೋಕ್ಸೊ) ಅಥವಾ ಬಾಲ್ಯವಿವಾಹ ನಿಷೇಧ ಕಾಯಿದೆ–2006ರ ನಿಬಂಧನೆಗಳ ಅಡಿಯಲ್ಲಿ ಉದ್ಭವಿಸುತ್ತಿರುವ ಮೊಕದ್ದಮೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯ.

Bar & Bench

“ಬಾಲ್ಯ ವಿವಾಹವನ್ನು ಕಾನೂನು ನಿಷೇಧಿಸಿದೆ ಎಂಬ ಫಲಕಗಳನ್ನು ದೇವಸ್ಥಾನ, ಕಲ್ಯಾಣ ಮಂಟಪ ಮತ್ತು ಅಂತಹುದೇ ಇತರ ಸ್ಥಳಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮಹತ್ವದ ತೀರ್ಪು ನೀಡಿದೆ.

ಪ್ರಕರಣ ರದ್ದತಿ ಎಂದು ಕೋರಿ ಎನ್‌ ಮಂಜುನಾಥ (ಬಾಲಕಿಯ ಪತಿ) ಸೇರಿದಂತೆ ಕುಟುಂಬದ ಒಟ್ಟು ಐವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.

“ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ 2012 (ಪೋಕ್ಸೊ) ಅಥವಾ ಬಾಲ್ಯವಿವಾಹ ನಿಷೇಧ ಕಾಯಿದೆ–2006ರ ನಿಬಂಧನೆಗಳ ಅಡಿಯಲ್ಲಿ ಉದ್ಭವಿಸುತ್ತಿರುವ ಮೊಕದ್ದಮೆಗಳ ಸಂಖ್ಯೆ ಹೆಚ್ಚಾಗುತ್ತಿದೆ” ಎಂದು ಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.

“ಬಾಲ್ಯ ವಿವಾಹ ನಿರ್ಮೂಲನೆ ಕೇವಲ ಶಾಸನಬದ್ಧ ಗುರಿಯಲ್ಲ, ಇದು ಸಾಂವಿಧಾನಿಕವಾಗಿ ಕಡ್ಡಾಯವಾದ ಅಂಶ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಸಮಾಜವನ್ನು ಸಂವೇದನಾಶೀಲಗೊಳಿಸುವಲ್ಲಿ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ತಮ್ಮ ಪಾತ್ರವನ್ನು ಇನ್ನಷ್ಟು ಕಾಳಜಿಯಿಂದ ನಿರ್ವಹಿಸಬೇಕು” ಎಂದು ಸೂಚಿಸಿದೆ.

“ಬಾಲ್ಯವಿವಾಹ ಎಂಬುದು ಸೌಮ್ಯವಾದ ಸಾಂಸ್ಕೃತಿಕ ಪದ್ಧತಿಯೇನೂ ಅಲ್ಲ. ಬದಲಾಗಿ ಮೂಲಭೂತ ಮಾನವ ಹಕ್ಕುಗಳ ನಿರಾಕರಣೆ. ಇದು ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸುತ್ತದೆ. ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ಮಗುವನ್ನು ಭಾವನಾತ್ಮಕ, ಸಾಮಾಜಿಕ ಮತ್ತು ಆರ್ಥಿಕ ಶೋಷಣೆಗೆ ಒಳಪಡಿಸುತ್ತದೆ. ಈ ದಿಸೆಯಲ್ಲಿ ದೊಡ್ಡವರು ಮಕ್ಕಳ ಕಲಿಕೆ, ಸ್ವಯಂ ಅನ್ವೇಷಣೆ ಮತ್ತು ಬೌದ್ಧಿಕ ವಿಕಸನದ ಬೆಳವಣಿಗೆಯ ವರ್ಷಗಳಲ್ಲಿ ತಮ್ಮ ಜವಾಬ್ದಾರಿಯನ್ನು ಮೆರೆಯುವ ಮೂಲಕ ಅವರ ಭವಿಷ್ಯವನ್ನು ರೂಪಿಸಲು ಅನುವು ಮಾಡಿಕೊಡಬೇಕು” ಎಂದಿದೆ.

ತೀರ್ಪಿನಲ್ಲಿ ಕೇರಳ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿರುವ ಪೀಠವು “ಬಾಲ್ಯ ವಿವಾಹವು ಹೆಚ್ಚಾಗಿ ಹುಡುಗಿಯರು ಶಾಲೆಯನ್ನು ತೊರೆಯುವಂತೆ ಮಾಡುತ್ತದೆ. ಇದು ಅವರ ಶಿಕ್ಷಣ ಮತ್ತು ಭವಿಷ್ಯದ ಅವಕಾಶಗಳನ್ನು ಸೀಮಿತಗೊಳಿಸುತ್ತದೆ. ಬಾಲ್ಯ ವಧುಗಳು ದೇಶೀಯ ಹಿಂಸೆ ಮತ್ತು ದೌರ್ಜನ್ಯಕ್ಕೆ ಹೆಚ್ಚು ಗುರಿಯಾಗುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದೆ.

“ಇದು ಬಡತನವನ್ನು ಶಾಶ್ವತಗೊಳಿಸುತ್ತದೆ ಮತ್ತು ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಆರ್ಥಿಕ ಅವಕಾಶಗಳನ್ನು ಸೀಮಿತಗೊಳಿಸುತ್ತದೆ. ಮಕ್ಕಳಲ್ಲಿ ಖಿನ್ನತೆ ಮತ್ತು ಆತಂಕವೂ ಸೇರಿದಂತೆ ಭಾವನಾತ್ಮಕ ಮತ್ತು ಮಾನಸಿಕ ಆಘಾತಗಳಿಗೆ ಕಾರಣವಾಗಬಹುದು. ಸಾಮಾಜಿಕ ಪ್ರತ್ಯೇಕತೆ ಮತ್ತು ಕುಟುಂಬ ಮತ್ತು ಸಮುದಾಯದಿಂದ ಸಂಪರ್ಕ ಕಡಿತಕ್ಕೂ ಕಾರಣವಾಗಬಹುದು” ಎಂದಿದೆ.

“ದಂಪತಿ ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂದು ಅರ್ಥೈಸುವುದನ್ನು ಒಪ್ಪಲು ಸಾಧ್ಯವಿಲ್ಲ. ಬಾಲ್ಯವಿವಾಹ ನಡೆಯದಂತೆ ನೋಡಿಕೊಳ್ಳಬೇಕಾದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಬಾಲ್ಯವಿವಾಹ ನಡೆಯುವ ಸಾಧ್ಯತೆಯ ಬಗ್ಗೆ ಯಾವುದೇ ಮಾಹಿತಿ ಬಂದರೆ, ಬಾಲ್ಯವಿವಾಹ ನಿಷೇಧ ಅಧಿಕಾರಿಗೆ ತಿಳಿಸುವುದು ಸರ್ಕಾರೇತರ ಸಂಸ್ಥೆಗಳ ಕರ್ತವ್ಯವೂ ಆಗಿದೆ. ನ್ಯಾಯಾಂಗ ಅಧಿಕಾರಿಗಳು, ಮ್ಯಾಜಿಸ್ಟ್ರೇಟ್ ಕೂಡ ಜಾಗರೂಕರಾಗಿರಬೇಕು. ಬಾಲ್ಯ ವಿವಾಹದ ಬಗ್ಗೆ ಯಾವುದೇ ವಿಶ್ವಾಸಾರ್ಹ ವರದಿ ಅಥವಾ ಮಾಹಿತಿ ಬಂದರೆ ಸ್ವಯಂಪ್ರೇರಿತವಾಗಿ ಗಮನ ಹರಿಸಬೇಕು” ಎಂದು ನಿರ್ದೇಶಿಸಿದೆ.

“ಕೋವಿಡ್‌ ಸಾಂಕ್ರಾಮಿಕ ಯಾರನ್ನು ಯಾವಾಗ ಬಲಿತೆಗೆದುಕೊಳ್ಳುವುದೋ ಏನೊ ನಾವು ಕಣ್ಮುಚ್ಚುವುದರೊಳಗೆ ಈಕೆಯ ಮದುವೆ ಮಾಡಿಬಿಡೋಣ” ಎಂದು 16 ವರ್ಷದ ಬಾಲಕಿಯನ್ನು 27ರ ವರನಿಗೆ ಕೊಟ್ಟು ಮದುವೆ ಮಾಡಿದ್ದ ಕುಟುಂಬದ ವಿರುದ್ಧ ದೇವನಹಳ್ಳಿ ತಾಲ್ಲೂಕು, ಶಿಶು ಅಭಿವೃದ್ಧಿ ಯೋಜನಾ ನೀಡಿದ್ದ ದೂರಿನ ಅನ್ವಯ  ಐವರು ಸದಸ್ಯರು ಈಗ ವಿಚಾರಣೆ ಎದುರಿಸುವಂತಾಗಿದೆ.

ಪುರೋಹಿತರೂ ಕಂಬಿ ಎಣಿಸಬೇಕಾಗುತ್ತದೆ

“ಬಾಲ್ಯ ವಿವಾಹ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಮತ್ತು ಸಂಪ್ರದಾಯಗಳ ಸ್ಪಷ್ಟ ಉಲ್ಲಂಘನೆ. ಇದು ಖಾಸಗಿ ಕುಟುಂಬದ ನಿಶ್ಚಿತಾರ್ಥವಲ್ಲ. ಸಾಮಾಜಿಕ ತಪ್ಪು ನಡೆ. ಇಂತಹ ಮದುವೆಗಳಲ್ಲಿನ ಭಾಗವಹಿಸುವಿಕೆ ಪ್ರತಿಯೊಂದು ಹಂತದಲ್ಲೂ ಹೊಣೆಗಾರಿಕೆಯನ್ನು ಬೇಡುತ್ತದೆ” ಎಂದು ಪೀಠ ಹೇಳಿದೆ.

“ಬಾಲ್ಯ ವಿವಾಹ ನಡೆಸುವ, ನಿರ್ದೇಶಿಸುವ ಅಥವಾ ಪ್ರಚೋದಿಸುವ ಯಾರಾದರೂ ಆಗಲಿ ಅದಕ್ಕೆ ಸಮಾನ ಹೊಣೆಗಾರರಾಗುತ್ತಾರೆ. ಸಮಾರಂಭವನ್ನು ಆಚರಿಸುವ ಪುರೋಹಿತ, ಅದನ್ನು ಏರ್ಪಡಿಸುವ ಸಂಬಂಧಿ, ಅದನ್ನು ಸುಗಮಗೊಳಿಸುವ ಆಯೋಜಕರು ಸೇರಿದಂತೆ ಎಲ್ಲರೂ ಬಾಲ್ಯ ವಿವಾಹ ನಿಷೇಧ ಕಾಯಿದೆಯ ಚೌಕಟ್ಟಿನಲ್ಲಿ ಶಿಕ್ಷಾರ್ಹ ಅಪರಾಧಿಗಳಾಗಿ ಕಂಬಿ ಎಣಿಸಬೇಕಾಗುತ್ತದೆ. ಕಾನೂನು ಅಜ್ಞಾನವನ್ನು ಕ್ಷಮಿಸುವುದಿಲ್ಲ. ಹೀಗಾಗಿ, ವಿವಾಹಗಳು ಜರುಗುವ ಪ್ರತಿಯೊಂದು ಸ್ಥಳದಲ್ಲಿ ಕ್ರಿಮಿನಲ್ ಹೊಣೆಗಾರಿಕೆಯ ಅರಿವು ಇರುವಂತೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ನೋಡಿಕೊಳ್ಳತಕ್ಕದ್ದು” ಎಂದು ಎಚ್ಚರಿಸಿದೆ.

Manjunatha N & others Vs State of Karnataka.pdf
Preview