Maintenance, Section 125 CrPC  
ಸುದ್ದಿಗಳು

ಮಗುವನ್ನು ಆಟಿಕೆಯಂತೆ ಕಾಣದೆ ಮನುಷ್ಯರಂತೆ ನೋಡಿ: ಸುಪರ್ದಿ ಪ್ರಕರಣದ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಕಿವಿಮಾತು

ಮಗುವನ್ನು ಮನುಷ್ಯರಂತೆ ಪರಿಗಣಿಸಬೇಕಿದ್ದು ಅತ್ಯಂತ ಮುಖ್ಯವಾದ ಅಂಶವೆಂದರೆ ಮಗುವಿನ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನ್ಯಾಯಮೂರ್ತಿ ಭರತ್ ದೇಶಪಾಂಡೆ ಅವರು ತಿಳಿಸಿದರು.

Bar & Bench

ಮಗುವಿನ ಪಾಲನೆ ವಿಚಾರದಲ್ಲಿ ಅದನ್ನು ಹೆತ್ತವರು ಆಟಿಕೆಯಂತೆ ಬಳಸದೆ ಮನುಷ್ಯರಂತೆ ಕಾಣಬೇಕು. ಮಗುವಿನ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಾಂಬೆ ಹೈಕೋರ್ಟ್‌ ಗೋವಾ ಪೀಠ ಈಚೆಗೆ ಹೇಳಿದೆ. 

ಬೇಸಿಗೆ ರಜೆಯಲ್ಲಿ ಮಗುವಿನ ತಾಯಿ ಮತ್ತು ತಂದೆ ಇಬ್ಬರೂ ಮಗುವನ್ನು ಸಮಾನವಾಗಿ ಪಾಲನೆ ಮಾಡಲು ಸಮಯಾವಕಾಶ ನೀಡಿ ನ್ಯಾ. ಭರತ್ ದೇಶಪಾಂಡೆ ಅವರು ಈ ವಿಚಾರ ತಿಳಿಸಿದರು. 

ಮಗುವನ್ನು ಏಳು ವಾರಗಳ ಕಾಲ ತಂದೆಯ ಸುಪರ್ದಿಗೆ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶ 5 ವರ್ಷದ ಮಗುವಿನ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಪೀಠ ಹೇಳಿದೆ. 

"ಅಂತಹ ಎಳೆಯ ವಯಸ್ಸಿನ ಮಗುವಿಗೆ ತಾಯಿಯ ಉಪಸ್ಥಿತಿ ಅತ್ಯಂತ ಮಹತ್ವದ್ದಾಗಿದೆ. ಆದರೂ, ಪಾಲನೆ ಮತ್ತು ಭೇಟಿಯ ಹಕ್ಕುಗಳ ಕಾರಣಕ್ಕೆ ತಂದೆಯನ್ನು ಸಹ ಪರಿಗಣಿಸಬೇಕಾಗುತ್ತದೆ" ಎಂದು ಜೂನ್ 14ರ ಆದೇಶದಲ್ಲಿ ನ್ಯಾಯಾಲಯ ವಿವರಿಸಿದೆ.

ಆದ್ದರಿಂದ, ರಜೆಯ ಅವಧಿಯನ್ನು ಪೋಷಕರ ನಡುವೆ ಸಮಾನವಾಗಿ ಹಂಚುವುದು ಸೂಕ್ತ ಎಂದು ಅಭಿಪ್ರಾಯಪಟ್ಟ ಪೀಠ 11 ವಾರಗಳ ರಜೆಯನ್ನು ಸಮಾನವಾಗಿ ಹಂಚಿ ತಂದೆ ತಾಯಿಗೆ ತಲಾ ಐದು ವಾರಗಳ ಪಾಲನಾ ಅವಧಿ ನೀಡಿತು.

ಹಿನ್ನೆಲೆ
ಅಮೆರಿಕ ಪ್ರಜೆಗಳಾಗಿದ್ದ ತಂದೆ- ತಾಯಿಯ ವಿವಾಹ ಕ್ಯಾಲಿಫೋರ್ನಿಯಾದಲ್ಲಿ ನಡೆದಿತ್ತು.  ಮಗು ಫೆಬ್ರವರಿ 2019ರಲ್ಲಿ ಪ್ಯಾರಿಸ್‌ನಲ್ಲಿ ಜನಿಸಿತ್ತು. ಆದರೆ ದಂಪತಿ ನಡುವಿನ ಸಂಬಂಧ ಹದಗೆಟ್ಟಿತ್ತು. ಕ್ಯಾಲಿಫೋರ್ನಿಯಾ ನ್ಯಾಯಾಲಯ ನೀಡಿದ್ದ ಏಕಪಕ್ಷೀಯ ಆದೇಶದಲ್ಲಿ ಮಗುವಿನ ಪಾಲನೆಯ ಹೊಣೆಯನ್ನು ತಂದೆಗೆ ವಹಿಸಿತ್ತು. ತಂದೆ ಮಗುವನ್ನು ಗೋವಾಕ್ಕೆ ಕರೆತಂದಿದ್ದರು.

ತರುವಾಯ ತಾಯಿಯೂ ಭಾರತಕ್ಕೆ ಬಂದಿದ್ದರು. ವಿಚ್ಛೇದಿತ ದಂಪತಿ ಮಾಪುಸಾದ ಕೌಟುಂಬಿಕ ನ್ಯಾಯಾಲಯಕ್ಕೆ ಮಗುವಿನ ಪಾಲನೆಗೆ ಸಂಬಂಧಿಸಿದಂತೆ ದಾವೆ ಹೂಡಿದ್ದರು.

ಪ್ರಕರಣ ಹೈಕೋರ್ಟ್‌ ತಲುಪಿತು. ಅಕ್ಟೋಬರ್ 2023ರಲ್ಲಿ ಮಗುವಿನ ಪಾಲನೆ ಹಕ್ಕನ್ನು ತಾಯಿಗೂ ಭೇಟಿಯ ಹಕ್ಕನ್ನು ತಂದೆಗೂ ನೀಡಿ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಆದರೆ ಮಗುವಿನ ಅನಾರೋಗ್ಯ ನೆಪವೊಡ್ಡಿ ತಮಗೆ ಮಗುವಿನ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ತಂದೆ ಮಾಪುಸಾದ ಕೌಟುಂಬಿಕ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ಅನಾರೋಗ್ಯದ ಕಾರಣಕ್ಕೆ ಮಗುವನ್ನು ಭೇಟಿ ಮಾಡಲು ಸಾಧ್ಯವಾಗದ ತಂದೆಗೆ ಬೇಸಿಗೆ ರಜೆ ವೇಳೆ ಏಳು ವಾರ ಕಾಲ ಪಾಲನೆಮಾಡಲು ಅವಕಾಶ ನೀಡಿತ್ತು. ತಾಯಿ 5 ವಾರ ಪಾಲನೆ ಮಾಡಬಹುದಾಗಿತ್ತು. ಇದರ ವಿರುದ್ಧ ತಾಯಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.