ಸುದ್ದಿಗಳು

ನಿರ್ಗತಿಕ ಮಕ್ಕಳನ್ನು ಗುರುತಿಸುವ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ದಿನಗೂಲಿ ಮಾಡುವವರ ಮಕ್ಕಳನ್ನು ಶೈಕ್ಷಣಿಕ ವರ್ಷದ ಮಧ್ಯಂತರದಲ್ಲೂ ಶಾಲೆಗೆ ದಾಖಲಿಸಿಕೊಳ್ಳುವ ಮೂಲಕ ಆ ಮಕ್ಕಳು ಬಾಲ ಕಾರ್ಮಿಕರಾಗದಂತೆ ಅಥವಾ ಭಿಕ್ಷಾಟನೆಯಲ್ಲಿ ತೊಡಗದಂತೆ ತಡೆಯಬೇಕು ಎಂದು ಸರ್ಕಾರೇತರ ಸಂಸ್ಥೆ ಲೆಟ್ಜ್‌ಕಿಟ್‌ ಕೋರಿದೆ.

Bar & Bench

ನಗರ ಪ್ರದೇಶದಲ್ಲಿ ಮನೆಯಿಲ್ಲದ ಮತ್ತು ನಿರ್ಗತಿಕ ಮಕ್ಕಳನ್ನು ಗುರುತಿಸುವುದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ಬೆಂಗಳೂರಿನ ಟ್ರಾಫಿಕ್‌ ಜಂಕ್ಷನ್‌ಗಳಲ್ಲಿ ವಿವಿಧ ವಸ್ತುಗಳನ್ನು ಮಕ್ಕಳು ಮಾರಾಟ ಮಾಡುವುದಕ್ಕೆ ನಿಷೇಧ ಹೇರುವಂತೆ ಲೆಟ್ಜ್‌ಕಿಟ್‌ ಫೌಂಡೇಶನ್‌ ಎಂಬ ಸರ್ಕಾರೇತರ ಸಂಸ್ಥೆಯು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಆದೇಶ ಮಾಡಿದೆ.

“ಮಕ್ಕಳನ್ನು ಭಿಕ್ಷಾಟನೆಗೆ ಮತ್ತು ಬಲವಂತವಾಗಿ ವಿವಿಧ ವಸ್ತುಗಳನ್ನು ಮಾರಾಟ ಮಾಡಲು ದೂಡುವುದು 21A ವಿಧಿಯ ಅನ್ವಯ ಅವರ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದಂತೆ. ಪರಿಸ್ಥಿತಿಗಳು ಮಕ್ಕಳನ್ನು ಹಾಗೆ ಮಾಡುವಂತೆ ಮಾಡಿದರೆ ಅದು 21A ವಿಧಿಯ ಅಡಿ ದೊರೆತಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ”.
ಕರ್ನಾಟಕ ಹೈಕೋರ್ಟ್

ಈ ಪ್ರಕ್ರಿಯೆ ಆರಂಭಿಸುವುದಕ್ಕೂ ಮುನ್ನ ನಿರ್ಗತಿಕ ಮಕ್ಕಳನ್ನು ಗುರುತಿಸುವ ಯೋಜನೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ. ಟ್ರಾಫಿಕ್‌ ಜಂಕ್ಷನ್‌ಗಳಲ್ಲಿ ಭಿಕ್ಷಾಟನೆ/ವಸ್ತುಗಳ ಮಾರಾಟದಲ್ಲಿ ತೊಡಗಿರುವ ಮಕ್ಕಳ ಕುರಿತಾದ ದತ್ತಾಂಶ ಸಂಗ್ರಹಿಸಲು ಸದರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳ ನೆರವನ್ನು ಬಿಬಿಎಂಪಿ ಕೋರಬಹುದಾಗಿದೆ ಎಂದು ನ್ಯಾಯಾಲಯವು ಹೇಳಿದೆ.

ಯೋಜನೆಯ ಕುರಿತು ವರದಿ ಸಲ್ಲಿಸಿದ ಬಳಿಕ ಬಾಲಾಪರಾಧಿ ನ್ಯಾಯ ಕಾಯಿದೆಯ ನಿಬಂಧನೆಗಳು, ಅದರಲ್ಲೂ ವಿಶೇಷವಾಗಿ ಕಾಯಿದೆಯ ನಾಲ್ಕನೇ ಅಧ್ಯಾಯವನ್ನು ಜಾರಿಗೊಳಿಸುವಂತೆ ಸೂಚಿಸುವುದಾಗಿ ಪೀಠ ಹೇಳಿದೆ.

ಕಾಯಿದೆಯ ಸೆಕ್ಷನ್‌ 2(d)ಯಲ್ಲಿ ಆರೈಕೆ ಮತ್ತು ಭದ್ರತೆ ಅವಶ್ಯವಿರುವ ಮಗು ಎಂದು ಉಲ್ಲೇಖಿಸಿರುವುದನ್ನು ಪರಿಗಣಿಸಬೇಕಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಯೋಜನೆ ಜಾರಿಗೊಂಡ ಬಳಿಕ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸರ್ಕಾರವನ್ನು ಪೀಠವು ಪ್ರಶ್ನಿಸಿತು.

ದಿನಗೂಲಿ ಮಾಡುವವರ ಮಕ್ಕಳನ್ನು ಶೈಕ್ಷಣಿಕ ವರ್ಷದ ಮಧ್ಯಂತರದಲ್ಲೂ ಶಾಲೆಗೆ ದಾಖಲಿಸಿಕೊಳ್ಳುವ ಮೂಲಕ ಆ ಮಕ್ಕಳು ಬಾಲ ಕಾರ್ಮಿಕರಾಗುವುದು ಅಥವಾ ಭಿಕ್ಷಾಟನೆಯಲ್ಲಿ ತೊಡಗದಂತೆ ತಡೆಯಲು ಸರ್ಕಾರಕ್ಕೆ ಸೂಚಿಸಬೇಕು ಎಂದು ನ್ಯಾಯಾಲಯವನ್ನು ಸರ್ಕಾರೇತರ ಸಂಸ್ಥೆಯಾದ ಲೆಟ್ಜ್‌ಕಿಟ್ ಫೌಂಡೇಷನ್‌ ಕೋರಿದೆ.

ವಕೀಲ ಪುತ್ತಿಗೆ ರಮೇಶ್‌ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದ್ದು, ನವೆಂಬರ್‌ 30ಕ್ಕೆ ಅರ್ಜಿ ವಿಚಾರಣೆಯನ್ನು ನಿಗದಿಗೊಳಿಸಲಾಗಿದೆ.