High Court of Karnataka 
ಸುದ್ದಿಗಳು

ಮಕ್ಕಳ ನಾಪತ್ತೆ ಪ್ರಕರಣ: 'ತಾರತಮ್ಯ ನೀತಿ ಅನುಸರಿಸಿಲ್ಲ' ಮುಖ್ಯ ಶಿಕ್ಷಕಿಯಿಂದ ಅಫಿಡವಿಟ್‌ ಸಲ್ಲಿಕೆ; ಪ್ರಕರಣ ಇತ್ಯರ್ಥ

ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಮನೋ ವಿಜ್ಞಾನಿಗಳು, ವೃತ್ತಿಪರ ಕೌನ್ಸೆಲಿಂಗ್‌ ಸಿಬ್ಬಂದಿ, ವೈದ್ಯರು & ಕಾನೂನು ತಂಡದಿಂದ ಅವರಿಗೆ ಮಾಸಿಕ ಅರಿವು ಕಾರ್ಯಕ್ರಮ ನಡೆಸಲಾಗುವುದು ಎಂದು ಅಫಿಡವಿಟ್‌ನಲ್ಲಿ ಉಲ್ಲೇಖ.

Bar & Bench

ಬೆಂಗಳೂರಿನ ಶಾಲೆಯೊಂದರ ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕಿ, ವಾರ್ಡನ್‌ ಮತ್ತು ಶಿಕ್ಷಕಿ ಸಲ್ಲಿಸಿರುವ ಅಫಿಡವಿಟ್‌ಗಳನ್ನು ದಾಖಲಿಸಿಕೊಂಡಿರುವ ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಕೆಲವು ಮಕ್ಕಳು ಶಾಲೆಯಿಂದ ನಾಪತ್ತೆಯಾಗಿದ್ದು, ಪತ್ತೆ ಹಚ್ಚಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾನ್ವೆಂಟ್‌ ಬಾಲಕಿಯರ ಪ್ರೌಢಶಾಲೆಯ ಮುಖ್ಯಸ್ಥೆ ಸಿಸ್ಟರ್‌ ಕ್ಲಾರಾ ಪಿ ವಿ ಅವರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿ, ಆದೇಶ ಮಾಡಿದೆ.

ಚೆನ್ನೈನಲ್ಲಿ ಮಕ್ಕಳನ್ನು ಪತ್ತೆ ಹಚ್ಚಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ವಶಕ್ಕೆ ಪಡೆಯಲಾದ ಮಕ್ಕಳು, ಶಿಕ್ಷಕರು, ಮುಖ್ಯ ಶಿಕ್ಷಕಿ, ಪೋಷಕರು ಮತ್ತು ಪೊಲೀಸರ ಜೊತೆ ಸಮಾಲೋಚನೆ ನಡೆಸಲಾಗಿದೆ. ಮನೆಯಷ್ಟೇ ಅಲ್ಲದೇ ಶಾಲೆ ಹಾಗೂ ವಿಸ್ತೃತ ನೆಲೆಯಲ್ಲಿ ಸಮಾಜದಲ್ಲಿನ ಘಟನೆಗಳಿಂದ ಮಕ್ಕಳು ಕ್ಷೋಭೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಅಫಿಡವಿಟ್‌ ಸಲ್ಲಿಸುವಂತೆ ಮುಖ್ಯ ಶಿಕ್ಷಕಿ, ವಾರ್ಡನ್‌ ಮತ್ತು ಶಿಕ್ಷಕರಿಗೆ ನ್ಯಾಯಾಲಯವು ನಿರ್ದೇಶಿಸಿತ್ತು.

“ನಾವು ಎಂದೆಂದೂ ತಾರತಮ್ಯ ನೀತಿಯನ್ನು ಅನುಸರಿಸಿಲ್ಲ. 127 ವರ್ಷಗಳಷ್ಟು ಹಳೆಯದಾದ ನಮ್ಮ ಸಂಸ್ಥೆಯು ಪ್ರತಿಯೊಂದು ಮಗುವಿನ ಘನತೆ ಮತ್ತು ಕಲ್ಯಾಣವನ್ನು ಆದ್ಯತೆಯನ್ನಾಗಿಸಿಕೊಂಡಿದ್ದು, ಮುಂದೆಯೂ ಅದನ್ನು ಮುಂದುವರಿಸಲಿದ್ದೇವೆ” ಎಂದು ಕ್ಲಾರಾ ಅವರು ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ.

“ಯಾವುದೇ ಕಾರಣಕ್ಕೆ ಮಕ್ಕಳು ಹೊರಗೆ ಹೋಗಿದ್ದರೂ ನನಗೆ ಅತೀವ ಒತ್ತಡವಾಗುತ್ತಿತ್ತು. ಅವರನ್ನು ನೋಡಿದ ಬಳಿಕ ನನಗೆ ತುಂಬಾ ಸಂತೋಷವಾಗಿದ್ದು, ಭವಿಷ್ಯದಲ್ಲಿ ಸಣ್ಣ ರೀತಿಯಲ್ಲೂ ಅವರಿಗೆ ಬೋಧಕ ಮತ್ತು ಬೋಧಕತೇತರ ಸಿಬ್ಬಂದಿಯಿಂದ ಕೆಟ್ಟ ಅನುಭವವಾಗದಂತೆ ನೋಡಿಕೊಳ್ಳುತ್ತೇನೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಮನೋ ವಿಜ್ಞಾನಿಗಳು, ವೃತ್ತಿಪರ ಕೌನ್ಸೆಲಿಂಗ್‌ ಸಿಬ್ಬಂದಿ, ವೈದ್ಯರು ಮತ್ತು ಕಾನೂನು ತಂಡದಿಂದ ಅವರಿಗೆ ಮೇಲಿಂದ ಮೇಲೆ ಮಾಸಿಕ ಅರಿವು ಕಾರ್ಯಕ್ರಮ ನಡೆಸಲಾಗುವುದು” ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿರುವುದನ್ನು ಪೀಠವು ಆದೇಶದಲ್ಲಿ ದಾಖಲಿಸಿ, ಅರ್ಜಿ ಇತ್ಯರ್ಥಪಡಿಸಿದೆ.