ಚಿತ್ರದುರ್ಗದ ಮುರುಘಾ ಮಠದ ಹಾಸ್ಟೆಲ್‌ನಲ್ಲಿ ವಾಸವಿದ್ದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೊ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣದಡಿ ಮೊದಲ ಆರೋಪಿಯಾಗಿ ಬಂಧಿತರಾಗಿರುವ ಆರೋಪಿ ಶಿವಮೂರ್ತಿ ಮುರುಘಾ ಶರಣರು ಹಾಗೂ ಎರಡನೇ ಆರೋಪಿಯಾದ ಅಕ್ಕಮಹಾದೇವಿ ಹಾಸ್ಟೆಲ್ ವಾರ್ಡನ್ ಎಸ್ ರಶ್ಮಿ ಅವರ ನ್ಯಾಯಾಂಗ ಬಂಧನವನ್ನು ನವೆಂಬರ್ 3ರ ವರೆಗೆ ವಿಸ್ತರಿಸಿ ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಶುಕ್ರವಾರ ಆದೇಶ ಮಾಡಿದೆ. ಇದರೊಂದಿಗೆ ಐದನೇ ಬಾರಿಗೆ ಮುರುಘಾ ಶರಣರ ನ್ಯಾಯಾಂಗ ಬಂಧನ ವಿಸ್ತರಣೆಯಾದಂತಾಗಿದೆ.
ಅಕ್ಟೋಬರ್ 10ರಂದು ವಿಶೇಷ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರು ವಿಧಿಸಿದ್ದ ನ್ಯಾಯಾಂಗ ಬಂಧನವು ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಇದನ್ನು ಪರಿಗಣಿಸಿದ ಪೀಠವು ಮುರುಘಾ ಶರಣರು ಮತ್ತು ರಶ್ಮಿ ಅವರ ನ್ಯಾಯಾಂಗ ಬಂಧನವನ್ನು 14 ದಿನಗಳ ವಿಸ್ತರಿಸಿದೆ.
ಸೆಪ್ಟೆಂಬರ್ 1ರಂದು ಬಂಧನಕ್ಕೊಳಗಾಗಿದ್ದ ಮುರುಘಾ ಶರಣರನ್ನು ಆರಂಭದಲ್ಲಿ ನಾಲ್ಕು ದಿನಗಳ ಕಾಲ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ನೀಡಿತ್ತು. ಆನಂತರ ಸೆಪ್ಟೆಂಬರ್ 5ರಿಂದ 14ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಬಳಿಕ ಮತ್ತೆ ಸೆಪ್ಟೆಂಬರ್ 27ರವರೆಗೆ, ಆನಂತರ ಅಕ್ಟೋಬರ್ 10ರವರೆಗೆ, ಬಳಿಕ ಅಕ್ಟೋಬರ್ 21ರ ನ್ಯಾಯಾಂಗ ಬಂಧನ ವಿಸ್ತರಿಸಲಾಗಿತ್ತು. ಈಗ ಮತ್ತೊಮ್ಮೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.
ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್), 6 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 376(2)(ಎನ್), 376(3), 149ರ ಅಡಿ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು. ಇದನ್ನು ಜೊತೆಗೆ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್), 6, ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 376(3), 149 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿರ್ಮೂಲನೆ) ಕಾಯಿದೆ ಸೆಕ್ಷನ್‌ಗಳಾದ 3(1) (ಡಬ್ಲ್ಯು) (1)(2), 3(2) (V) ಅಡಿ ಹೆಚ್ಚುವರಿಯಾಗಿ ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದಲ್ಲದೇ, ಮತ್ತೆ ಇಬ್ಬರು ಬಾಲಕಿಯರು ಮುರುಘಾ ಶರಣರು ಸೇರಿದಂತೆ ಏಳು ಮಂದಿಯ ವಿರುದ್ಧ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಪೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಮುರುಘಾ ಶರಣರು, ಹಾಸ್ಟೆಲ್ ವಾರ್ಡನ್ ರಶ್ಮಿ, ಬಸವಾದಿತ್ಯ, ಪರಮಶಿವಯ್ಯ, ಗಂಗಾಧರ, ಮಹಾಲಿಂಗ ಮತ್ತು ಕರಿಬಸಪ್ಪ ಅವರನ್ನು ಕ್ರಮವಾಗಿ ಒಂದರಿಂದ ಏಳನೇ ಆರೋಪಿಗಳನ್ನಾಗಿಸಲಾಗಿದೆ.