SCAORA 
ಸುದ್ದಿಗಳು

ಹಿರಿಯ ನ್ಯಾಯವಾದಿ ದಾತಾರ್ ಅವರಿಗೆ ಇ ಡಿ ಸಮನ್ಸ್: ಎಸ್‌ಸಿಎಒಆರ್‌ಎ ತೀವ್ರ ಖಂಡನೆ

ಇ ಡಿಯ ಕ್ರಮ ಅನಗತ್ಯವಾಗಿದ್ದು ಕಾನೂನು ವೃತ್ತಿ ಮೇಲೆ ಪರಿಣಾಮ ಬೀರುವ ತನಿಖಾ ಅತಿಕ್ರಮಣ ಎಂದು ಸಂಘ ಕಳವಳ ವ್ಯಕ್ತಪಡಿಸಿದೆ.

Bar & Bench

ರಿಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಅಧ್ಯಕ್ಷೆ ರಶ್ಮಿ ಸಳುಜಾ ಅವರಿಗೆ ಕೇರ್ ಹೆಲ್ತ್ ಇನ್ಶುರೆನ್ಸ್ ನೀಡಿದ್ದ ನೌಕರರ ಷೇರು ಆಯ್ಕೆ ಯೋಜನೆ (ಇಎಸ್ಒಪಿ) ಕುರಿತಂತೆ ಕಾನೂನು ಅಭಿಪ್ರಾಯ ನೀಡಿದ್ದ ಹಿರಿಯ ನ್ಯಾಯವಾದಿ ಅರವಿಂದ್ ದಾತಾರ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ ತೀವ್ರ ಅಸಮ್ಮತಿ ವ್ಯಕ್ತಪಡಿಸಿದ್ದು ಕಾನೂನು ವೃತ್ತಿಯ ಮೇಲೆ ಇದು ವ್ಯಾಪಕ ಪರಿಣಾಮ ಬೀರುತ್ತದೆ ಎಂದಿದೆ.

 ಇ ಡಿಯ ಕ್ರಮ ಅನಗತ್ಯವಾಗಿದ್ದು ಕಾನೂನು ವೃತ್ತಿ ಮೇಲೆ ಪರಿಣಾಮ ಬೀರುವ ತನಿಖಾ ಅತಿಕ್ರಮಣ ಎಂದು ಸಂಘ ಜೂನ್ 16 ರಂದು ಬಿಡುಗಡೆ ಮಾಡಿರುವ ಗೌರವ ಕಾರ್ಯದರ್ಶಿ ನಿಖಿಲ್ ಜೈನ್ ಸಹಿ ಇರುವ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಪ್ರಕಟಣೆಯ ಪ್ರಮುಖಾಂಶಗಳು

  • ಗೌರವಾನ್ವಿತ ಹಿರಿಯ ವಕೀಲರು ಶ್ರೀ ದಾತಾರ್‌ ಅವರು ನಿರಂತರವಾಗಿ ವೃತ್ತಿಪರ ನಡೆ ಮತ್ತು ಕಾನೂನು ನೈತಿಕತೆಯನ್ನು ಎತ್ತಿ ಹಿಡಿದವರು. ಬೆರಳು ಮಾಡಲಾಗದಂತಹ ವ್ಯಕ್ತಿತ್ವ ಉಳ್ಳವರು.

  • ಇ ಡಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು ಕಾನೂನು ಸಲಹೆಯನ್ನು ಅಪರಾಧಿಕ ಶಾಮೀಲಿನೊಂದಿಗೆ ಸಮೀಕರಿಸುತ್ತದೆ.

  • ಕಾನೂನು ಸಮುದಾಯಕ್ಕೆ ನಿರಾಶಾದಾಯಕ ಸಂದೇಶ ರವಾನೆಯಾಗಿದೆ.

  • ಇದು ಸಾಂವಿಧಾನಿಕವಾಗಿ ಅಸಮರ್ಥನೀಯ ಮಾತ್ರವಲ್ಲ ಕಾನೂನುಬದ್ಧವಾಗಿಯೂ ಒಪ್ಪಿಕೊಳ್ಳುವಂತಹದ್ದಲ್ಲ.

  • ಇಂತಹ ಕ್ರಮಗಳು ವಕೀಲರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದರ ಜೊತೆಗೆ ಕಾನೂನು ಸಲಹೆ ಪಡೆಯುವ ಜನರ ಸಾಂವಿಧಾನಿಕ ಹಕ್ಕಿನ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತವೆ.

  • ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ವಕೀಲರ ಸ್ವಾತಂತ್ರ್ಯ ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಅವಳಿ ಸ್ತಂಭಗಳಾಗಿವೆ.

  • ನಿರ್ಭೀತ ಮತ್ತು ಸ್ವತಂತ್ರ ವಕೀಲರಿಲ್ಲದೆ ನ್ಯಾಯಾಲಯಗಳ ಪರಿಣಾಮಕಾರಿ ಕಾರ್ಯನಿರ್ವಹಣೆ ಅಸಾಧ್ಯ.

ಹಿನ್ನೆಲೆ

ದಾತಾರ್ ಅವರಿಗೆ ಸಮನ್ಸ್‌ ನೋಟಿಸ್‌ ನೀಡಿದ್ದ ಜಾರಿ ನಿರ್ದೇಶನಾಲಯ ಬಳಿಕ ಅದನ್ನು ಹಿಂಪಡೆದಿತ್ತು. ಸಹಾರಾ ನಿಧಿಸಂಗ್ರಹ ಪ್ರಕರಣ ಸೇರಿದಂತೆ ಮಹತ್ವದ ಪ್ರಕರಣಗಳಲ್ಲಿ ಸೆಬಿಯ ಪರವಾಗಿ ವಾದ ಮಂಡಿಸುವ ದಾತಾರ್ ಅವರು, ತಮ್ಮ ಕಕ್ಷಿದಾರರನ್ನು ಒಳಗೊಂಡ ತನಿಖೆಗಳಿಗೆ ವಕೀಲರನ್ನು ಕರೆಸುವಂತಿಲ್ಲ ಎಂದು ಇ ಡಿ ಅಧಿಕಾರಿಗಳಿಗೆ ತಿಳಿಸಿದ್ದರು ಎಂದು ವರದಿಯಾಗಿತ್ತು. ತಮಗೆ ವೃತ್ತಿಪರ ಸವಲತ್ತುಗಳು ಇದ್ದು ವಕೀಲರು ತಮ್ಮ ಕಕ್ಷಿದಾರರಿಗೆ ನೀಡಲಾದ ಕಾನೂನು ಸಲಹೆ  ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದರು.