RCB with Karnataka High Court 
ಸುದ್ದಿಗಳು

ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಕಾಲ್ತುಳಿತ: ನಿಖಿಲ್‌ ಸೋಸಲೆ ಸೇರಿ ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಸ್ವಯಂಪ್ರೇರಿತವಾಗಿ ನೀಡಿದ ದೂರಿನ ಅನ್ವಯ ಬಿಎನ್‌ಎಸ್‌ ಸೆಕ್ಷನ್‌ಗಳಾದ 105, 115(2), 118(1), 118(2) ಜೊತೆಗೆ 3(5), 190, 132, 125(a) 125(b) ಅಡಿ ಪ್ರಕರಣ ದಾಖಲಿಸಲಾಗಿದೆ.

Bar & Bench

ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ರಾಯಲ್‌ ಚಾಲೆಂಜರ್ಸ್‌ ಫ್ರಾಂಚೈಸಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್‌ ಸೋಸಲೆ ಸೇರಿ ನಾಲ್ವರನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಶುಕ್ರವಾರ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಡಿಎನ್‌ಎ ಈವೆಂಟ್‌ ಮ್ಯಾನೇಜ್‌ಮೆಂಟ್‌ನ ಕಿರಣ್‌ ಕುಮಾರ್‌ ಮತ್ತು ಸುನೀಲ್‌ ಮ್ಯಾಥ್ಯೂ ಮತ್ತು ಸುಮಂತ್‌ ಹಾಗೂ ಮುಂಬೈಗೆ ಹಾರಲು ಸಿದ್ಧವಾಗಿದ್ದ ನಿಖಿಲ್‌ ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಪೊಲೀಸರು ಸಂಜೆ 41ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಯೋಗೇಶ್‌ ಅವರ ಮುಂದೆ ಹಾಜರುಪಡಿಸಿದರು.

ಪ್ರಕರಣದ ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ಅವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಈ ನಡುವೆ, ನಿಖಿಲ್‌ ಅವರು ತಮ್ಮ ಬಂಧನ ಅಕ್ರಮ ಎಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಮೃತಪಟ್ಟಿದ್ದು, 47 ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಸ್ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಪದಾಧಿಕಾರಿಗಳ ವಿರುದ್ದ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಪ್ರತ್ಯೇಕವಾಗಿ ಮೂರು ಎಫ್‌ಐಆರ್‌ ದಾಖಲಿಸಲಾಗಿದೆ. ಈ ಮೂರು ಪ್ರಕರಣಗಳನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ವಹಿಸಿದೆ.

ಕಬ್ಬನ್‌ ಪಾರ್ಕ್‌ ಠಾಣಾಧಿಕಾರಿ ಸ್ವಯಂಪ್ರೇರಿತವಾಗಿ ನೀಡಿದ ದೂರಿನ ಅನ್ವಯ ಬಿಎನ್‌ಎಸ್‌ ಸೆಕ್ಷನ್‌ಗಳಾದ 105, 115(2), 118(1), 118(2) ಜೊತೆಗೆ 3(5), 190, 132, 125(a) 125(b) ಅಡಿ ಪ್ರಕರಣ ದಾಖಲಿಸಲಾಗಿದೆ.