ಸುದ್ದಿಗಳು

ಇದೇನು ಚಿತ್ರಮಂದಿರವೇ? ಕೋಟ್ ಧರಿಸದ ಐಎಎಸ್ ಅಧಿಕಾರಿಗೆ ಪಾಟ್ನಾ ಹೈಕೋರ್ಟ್ ತರಾಟೆ

ತೆರೆದ ಕಾಲರ್ ಅಂಗಿ ಧರಿಸಿದ್ದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಗ್ಗೆ ನ್ಯಾಯಾಲಯ ಕೆಂಗಣ್ಣು ಬೀರಿತು.

Bar & Bench

ಅನುಚಿತ ರೀತಿಯಲ್ಲಿ ಧಿರಿಸು ತೊಟ್ಟು ವಿಚಾರಣೆಗೆ ಹಾಜರಾಗಿದ್ದ ಐಎಎಸ್‌ ಅಧಿಕಾರಿಯೊಬ್ಬರನ್ನು ಪಾಟ್ನಾ ಹೈಕೋರ್ಟ್ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿತು.

ಬಿಹಾರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆನಂದ್ ಕಿಶೋರ್ ಅವರು ಧರಿಸಿದ್ದ ಉಡುಪಿನ ಬಗ್ಗೆ ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರಿದ್ದ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿತು. "ಇದು ಚಿತ್ರಮಂದಿರ ಎಂದು ನೀವು ಭಾವಿಸುತ್ತೀರಾ?" ಎಂದು ನ್ಯಾಯಮೂರ್ತಿಗಳು ಕೇಳಿದರು.

ತಮ್ಮನ್ನು ಸೇವೆಯಿಂದ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಅರ್ಜಿದಾರರೊಬ್ಬರು ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಕಿಶೋರ್ ಹೈಕೋರ್ಟ್‌ಗೆ ಹಾಜರಾಗಿದ್ದರು. ಪ್ರಕರಣವನ್ನು ವಿಚಾರಣೆಗೆ ಕರೆದ ಸಂದರ್ಭದಲ್ಲಿ ನ್ಯಾಯಾಲಯ ಕಿಶೋರ್ ಅವರನ್ನು ಕರೆದು "ನೀವು ಐಎಎಸ್ ಅಧಿಕಾರಿಯಾ? ಕೋರ್ಟ್‌ಗೆ ಯಾವ ವಸ್ತ್ರಸಂಹಿತೆಯೊಂದಿಗೆ ಹಾಜರಾಗಬೇಕು ಎಂದು ನಿಮಗೆ ತಿಳಿದಿಲ್ಲವೇ?" ಎಂದು ಪ್ರಶ್ನಿಸಿತು.

“ಐಎಎಸ್‌ಗೆ ಆಯ್ಕೆಯಾದ ಬಳಿಕ ಮಸ್ಸೂರಿಯಲ್ಲಿ ತರಬೇತಿಗೆ ಹಾಜರಾಗಿದ್ದಿರಾ?” ಎಂದು ಅಧಿಕಾರಿಯನ್ನು ಸಿಟ್ಟಿನಿಂದ ನ್ಯಾಯಮೂರ್ತಿಗಳು ಪ್ರಶ್ನಿಸಿದರು. ತೆರೆದ ಕಾಲರಿನ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ ಅಧಿಕಾರಿ, “ಐಎಎಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಲು ಪಾಲಿಸಬೇಕಾದ ವಸ್ತ್ರ ಸಂಹಿತೆ ಬಗ್ಗೆ ಯಾವುದೇ ಮಾರ್ಗಸೂಚಿಗಳಿಲ್ಲ” ಎಂದು ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಜೊತೆಗೆ ಇದು ನಾವು ಹೈಕೋರ್ಟ್‌ಗೆ ಹಾಜರಾಗುವ ಉಡುಗೆ ಎಂದು ಹೇಳಿದರು.

ಆದರೂ ದೃಢ ನಿಲುವಿನೊಂದಿಗೆ ನ್ಯಾಯಮೂರ್ತಿಗಳು “ಕನಿಷ್ಠ ಕೋಟ್ ಧರಿಸಿರಬೇಕು ಮತ್ತು ಕಾಲರ್ ಮುಚ್ಚಿರಬೇಕು” ಎಂದು ಹೇಳಿದರು. "ಬಿಹಾರದ ಐಎಎಸ್ ಅಧಿಕಾರಿಗಳಿಗೇನಾಗಿದೆ? ಕೋರ್ಟ್‌ಗೆ ಹೇಗೆ ಹಾಜರಾಗಬೇಕೆಂದು ಅವರಿಗೆ ತಿಳಿದಿಲ್ಲವೇ?" ಎಂದು ಪ್ರಶ್ನಿಸಿದರು.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು “ಐಎಎಸ್‌ ಅಧಿಕಾರಿ ಸೂಕ್ತ ರೀತಿಯಲ್ಲೇ ಬಟ್ಟೆ ಧರಿಸಿದ್ದರು. ಕೋಟ್‌ ಮತ್ತು ಮುಚ್ಚಿದ ಕಾಲರ್‌ ವಸಾಹತುಶಾಹಿ ಕಾಲದ ಪಳೆಯುಳಿಕೆಗಳಾಗಿದ್ದು ಬೇಸಿಗೆಯಲ್ಲಿ ಅದನ್ನು ಧರಿಸುವಂತೆ ಒತ್ತಾಯಿಸಬೇಕಿರಲಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.