Supreme Court 
ಸುದ್ದಿಗಳು

ಸಾಂದರ್ಭಿಕ ಸಾಕ್ಷ್ಯಗಳ ವೇಳೆ, ಆರೋಪಿಯ ತಪ್ಪು ಸಾಬೀತುಪಡಿಸುವ ಸರಣಿ ಎಲ್ಲಾ ರೀತಿಯಲ್ಲೂ ಪೂರ್ಣಗೊಂಡಿರಬೇಕು: ಸುಪ್ರೀಂ

Bar & Bench

ಸಾಂದರ್ಭಿಕ ಸಾಕ್ಷ್ಯದ ಸಂದರ್ಭದಲ್ಲಿ  ಸಾಕ್ಷ್ಯಗಳ ಸರಣಿ ಎಲ್ಲಾ ರೀತಿಯಲ್ಲೂ ಪೂರ್ಣವಾಗಿರಬೇಕಿದ್ದು ಬೇರಾವುದೇ ಸಿದ್ಧಾಂತಕ್ಕೆ ಆಸ್ಪದವಿರಬಾರದು ಎಂದು ಇತ್ತೀಚೆಗೆ 22 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಖುಲಾಸೆಗೊಳಿಸುವ ವೇಳೆ ಸುಪ್ರೀಂ ಕೋರ್ಟ್‌ ಪ್ರತಿಪಾದಿಸಿತು [ಲಕ್ಷ್ಮಣ್ ಪ್ರಸಾದ್ ಅಲಿಯಾಸ್‌ ಲಕ್ಷ್ಮಣ್  ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಸಾಂದರ್ಭಿಕ ಸಾಕ್ಷ್ಯಗಳ ಸರಣಿಯಲ್ಲಿ ಯಾವುದೇ ಕಾಣೆಯಾದ ಅಥವಾ ಸಾಬೀತಾಗದ ಕೊಂಡಿಗಳಿದ್ದಲ್ಲಿ ಆರೋಪಿಗಳ ವಿರುದ್ಧದ ವಾದಕ್ಕೆ ಸೋಲಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ವಿಭಾಗೀಯ ಪೀಠ ವಿವರಿಸಿತು.  

"ಸಾಂದರ್ಭಿಕ ಸಾಕ್ಷ್ಯದ ವೇಳೆ, ಆರೋಪಿಯ ಅಪರಾಧವನ್ನು ಸಾಬೀತುಪಡಿಸಬೇಕಾದರೆ ಮತ್ತು ಅಪರಾಧದ ಇತರ ಸಿದ್ಧಾಂತವನ್ನು ಹೊರಗಿಡಬೇಕಾದರೆ ಸರಣಿಯು ಎಲ್ಲಾ ರೀತಿಯಲ್ಲೂ ಸಂಪೂರ್ಣವಾಗಿರಬೇಕು. ಈ ಮೇಲಿನ ಅಂಶಕ್ಕೆ ಸಂಬಂಧಿಸಿದಂತೆ ಕಾನೂನು ಉತ್ತಮ ರೀತಿಯಲ್ಲಿ  ನೆಲೆಗೊಂಡಿದೆ" ಎಂದು ತೀರ್ಪು ಹೇಳಿದೆ.

ಐಪಿಸಿ ಸೆಕ್ಷನ್‌ 302 (ಕೊಲೆ) ಅಡಿಯಲ್ಲಿ ಮೇಲ್ಮನವಿದಾರನ ಶಿಕ್ಷೆಯನ್ನು ಎತ್ತಿಹಿಡಿದಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ 2010ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಪುರಸ್ಕರಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಾಕ್ಷ್ಯಗಳ ಯಾವುದೇ ಕೊಂಡಿ ನಾಪತ್ತೆಯಾಗಿದ್ದರೆ ಮತ್ತು ಅವು ಸಾಬೀತಾಗದೆ ಇದ್ದರೆ ಆರೋಪಿಯ ಶಿಕ್ಷೆಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಬೇಕು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ, ಆರೋಪಿಯ ವಿರುದ್ಧ ಪೊಲೀಸರು ಉಲ್ಲೇಖಿಸಿರುವ ಸಾಂದರ್ಭಿಕ ಸಾಕ್ಷ್ಯವು ಉದ್ದೇಶ, ಕೊನೆಯದಾಗಿ ನೋಡಿರುವುದು, ಮತ್ತು ಮೇಲ್ಮನವಿದಾರರಿಂದ ಅಪರಾಧ ಕೃತ್ಯದಲ್ಲಿ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳುವುದನ್ನು ಒಳಗೊಂಡಿತ್ತು.

ಇವುಗಳಲ್ಲಿ ಉದ್ದೇಶ ಮತ್ತು ಕೊನೆಯದಾಗಿ ಕಂಡಿರುವುದು ಎಂಬೆರಡು ಸಂಗತಿಗಳು ಸಾಬೀತಾಗಿರುವುದನ್ನು ಹೈಕೋರ್ಟ್‌ ಕಂಡುಕೊಂಡಿತ್ತು. ಆದರೆ ಮೂರನೆಯ ಕೊಂಡಿ ಅಂದರೆ ಮೇಲ್ಮನವಿದಾರರಿಂದ ಆಯುಧ ವಶಪಡಿಸಿಕೊಳ್ಳುವ ಅಂಶ ಸಾಬೀತಾಗಿರಲಿಲ್ಲ ಅಥವಾ ಅಮಾನ್ಯವಾಗಿದೆ ಎಂದು ಅದು ಹೇಳಿತ್ತು. ಆದಾಗ್ಯೂ, ಆರೋಪಿಗೆ ಹತ್ಯೆ ಮಾಡಿದ್ದಕ್ಕಾಗಿ ನೀಡಲಾದ ಶಿಕ್ಷೆಯನ್ನು ಹೈಕೋರ್ಟ್‌ ದೃಢಪಡಿಸಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ʼಹೈಕೋರ್ಟ್‌ ಆದೇಶ ನೀಡುವಲ್ಲಿ ಎಡವಿದೆ' ಎಂದು ಹೇಳಿದೆ. ಸಾಂದರ್ಭಿಕ ಸಾಕ್ಷ್ಯದ ವೇಳೆ ಅನುಸರಿಸಬೇಕಾದ ಸರಣಿಯ ವೇಳೆ ಕೊನೆಯ ಕೊಂಡಿ ಪಾಲನೆಯಾಗದಿರುವುದನ್ನು ಸರ್ವೋಚ್ಚ ನ್ಯಾಯಾಲಯ ಗಮನಿಸಿತು.

"ಯಾವುದೇ ಒಂದು ಕೊಂಡಿ ನಾಪತ್ತೆಯಾಗಿರುವುದನ್ನು ಹೈಕೋರ್ಟ್‌ ಗಮನಿಸಿದರೆ ಅಥವಾ ನಿರ್ಧರಿತವಾದ ಕಾನೂನಿನನ್ವಯ ಆ ಅಂಶ ಸಾಬೀತಾಗದೆ ಹೋದರೆ, ಶಿಕ್ಷೆಯಲ್ಲಿ ಮಧ್ಯಪ್ರವೇಶಿಸಬೇಕಾಗುತ್ತದೆ," ಎಂದು ಅದು ಹೇಳಿತು. ಆ ರೀತ್ಯಾ ಮೇಲ್ಮನವಿದಾರರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಬದಿಗೆ ಸರಿಸಿತು.

ಶರದ್ ಬಿರ್ಡಿಚಂದ್ ಶಾರದಾ ಮತ್ತು ಮಹಾರಾಷ್ಟ್ರ ಸರ್ಕಾರ (1984) ಹಾಗೂ ಸೈಲೇಂದ್ರ ರಾಜ್‌ದೇವ್ ಪಾಸ್ವಾನ್ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣಗಳನ್ನು ಅವಲಂಬಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.