Karnataka High Court 
ಸುದ್ದಿಗಳು

ಕಲಾಪದ ವೇಳೆ ಜನರು ಕಾಲಿನ ಮೇಲೆ ಕಾಲು ಹಾಕಿ ಕೂರುವುದನ್ನು ನಿರ್ಬಂಧಿಸುವ ಯಾವುದೇ ಆದೇಶ, ನಿಯಮಾವಳಿ ಇಲ್ಲ: ಹೈಕೋರ್ಟ್‌

ಮಾಹಿತಿ ಹಕ್ಕು ಕಾಯಿದೆ ಅಡಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಸಲ್ಲಿಸಿದ್ದ ಅರ್ಜಿಗೆ ಜಂಟಿ ರಿಜಿಸ್ಟ್ರಾರ್‌ ಮತ್ತು ಹೈಕೋರ್ಟ್‌ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಬಿ ವಿ ರೇಣುಕಮ್ಮ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.

Bar & Bench

ನ್ಯಾಯಾಲಯದಲ್ಲಿ ಕಲಾಪ ನಡೆಯುವ ಸಂದರ್ಭದಲ್ಲಿ ಜನರು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದನ್ನು ನಿರ್ಬಂಧಿಸಿರುವ ಯಾವುದೇ ನಿಯಮಗಳು ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.

ಕಲಾಪದ ಸಂದರ್ಭದಲ್ಲಿ ನಾಗರಿಕರು ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದಕ್ಕೆ ನಿರ್ಬಂಧ ವಿಧಿಸಿ ಕರ್ನಾಟಕ ಹೈಕೋರ್ಟ್‌ಹೊರಡಿಸಿರುವ ಆದೇಶ, ತೀರ್ಪು, ಮಾರ್ಗಸೂಚಿ ಅಧಿಸೂಚನೆ ಅಥವಾ ನಿರ್ದೇಶನ ನೀಡಿರುವುದಕ್ಕೆ ಸಂಬಂಧಿಸಿದ ಆದೇಶ ನೀಡುವಂತೆ ಕೋರಿ ಮಾಹಿತಿ ಹಕ್ಕು ಕಾಯಿದೆ ಅಡಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಸಲ್ಲಿಸಿದ್ದ ಅರ್ಜಿಗೆ ಜಂಟಿ ರಿಜಿಸ್ಟ್ರಾರ್‌ ಮತ್ತು ಹೈಕೋರ್ಟ್‌ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಬಿ ವಿ ರೇಣುಕಮ್ಮ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.

ಅರ್ಜಿದಾರರ ಕೋರಿಕೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಶಾಖೆಯು ಯಾವುದೇ ಅಧಿಸೂಚನೆ, ಆದೇಶ, ತೀರ್ಪು, ಮಾರ್ಗಸೂಚಿ ಅಥವಾ ನಿರ್ದೇಶನಗಳನ್ನು ಕರ್ನಾಟಕ ಹೈಕೋರ್ಟ್‌ನಿಂದ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಂದ ಸ್ವೀಕರಿಸಿಲ್ಲ. ಈ ಕುರಿತು ಹಂಚಿಕೊಳ್ಳಲು ಈ ಶಾಖೆಯ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಮಾಹಿತಿ ನೀಡಲಾಗಿದೆ.

ಮೇ 27ರಂದು ಮಾಹಿತಿ ಕೋರಿ ಬರೆದಿದ್ದ ಪತ್ರವು ಮೇ 30ಕ್ಕೆ ಹೈಕೋರ್ಟ್‌ನಲ್ಲಿ ಸ್ವೀಕೃತವಾಗಿತ್ತು. ಇದಕ್ಕೆ ಜೂನ್‌ 9ರಂದು ಸಾರ್ವಜನಿಕ ಸಂಪರ್ಕಾಧಿಕಾರಿ ಉತ್ತರಿಸಿದ್ದಾರೆ.