ಪ್ರಜಾಪ್ರಭುತ್ವದಲ್ಲಿ ಎಲ್ಲಾ ನಾಗರಿಕರು ಮುಕ್ತತೆಯನ್ನು ಅನುಭವಿಸಲು, ರಾಜ್ಯವು ಸಂಖ್ಯಾತ್ಮಕವಾಗಿ ಅಥವಾ ಸಾಮಾಜಿಕವಾಗಿ ಅಲ್ಪಸಂಖ್ಯಾತರಾಗಿರುವ ದುರ್ಬಲ ಜನಸಂಖ್ಯೆಯ ಪರವಾಗಿ ನಿಲ್ಲಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಶನಿವಾರ ಅಭಿಪ್ರಾಯಪಟ್ಟರು. ಡೆಹ್ರಾಡೂನ್‌ನಲ್ಲಿ ನಡೆದ ನ್ಯಾಯಮೂರ್ತಿ ಕೆ ಸಿ ಧುಲಿಯಾ ಸ್ಮಾರಕ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ನಾಗರಿಕರು ಕೇವಲ ಪ್ರತಿಸ್ಪರ್ಧಿಗಳಾಗಿ ಮಾತ್ರವಲ್ಲದೆ ಪರಸ್ಪರ ಕೊಡುಕೊಳ್ಳುವಿಕೆ ಮತ್ತು ಪರಸ್ಪರ ಗೌರವಯುತವಾದ ಸಂಬಂಧಗಳನ್ನೂ ಹೊಂದಿರಬೇಕು ಎಂದು ಅವರು ಒತ್ತಿ ಹೇಳಿದರು.
"ಪ್ರಜಾಪ್ರಭುತ್ವವು ಸಾಮಾಜಿಕ ಶ್ರೇಣೀಕರಣ ಮತ್ತು ಪೂರ್ವಾಗ್ರಹಗಳನ್ನು ಬೇರುಸಹಿತ ಕಿತ್ತೊಗೆಯುವತ್ತ ಕೆಲಸ ಮಾಡಿದಾಗ ಮಾತ್ರ ಇದು ಸಂಭವಿಸಬಹುದು. ಪ್ರಜಾಪ್ರಭುತ್ವದಲ್ಲಿ ಎಲ್ಲಾ ನಾಗರಿಕರು ಸುರಕ್ಷಿತವಾಗಿರಲು, ರಾಜ್ಯವು ದುರ್ಬಲ ಜನಸಂಖ್ಯೆಯ ಪರವಾಗಿ ನಿಲ್ಲಬೇಕು, ಅದು ಸಂಖ್ಯಾತ್ಮಕವಾಗಿ ಅಥವಾ ಸಾಮಾಜಿಕ ಅಲ್ಪಸಂಖ್ಯಾತರಾಗಿರಬಹುದು" ಎಂದು ಅವರು ಅಭಿಪ್ರಾಯಪಟ್ಟರು.
ಇದು ಬಹುಸಂಖ್ಯಾತರ ಆಳ್ವಿಕೆಯ ಪ್ರಜಾಪ್ರಭುತ್ವ ತತ್ವಕ್ಕೆ ವಿರುದ್ಧವಾಗಿ ತೋರಿದರೂ, ಪ್ರಜಾಪ್ರಭುತ್ವದ ಸೌಂದರ್ಯವೆಂದರೆ ಎಲ್ಲಾ ನಾಗರಿಕರು ನೈತಿಕ ಸ್ಥಾನಮಾನದ ಪ್ರಜ್ಞೆಯೊಂದಿಗೆ, ಒಮ್ಮತದ ನಿರ್ಧಾರ ಕೈಗೊಳ್ಳುವಲ್ಲಿ ಭಾಗವಹಿಸುವುದಾಗಿರುತ್ತದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದಲ್ಲಿ, ಬಹುಸಂಖ್ಯಾತರು ತಮಗೆ ಬೇಕಾದ್ದನ್ನು ಪಡೆಯುತ್ತಾರೆ, ಆದರೆ ಅಲ್ಪಸಂಖ್ಯಾತರು ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಇರಬೇಕು ಎಂದು ವಿವರಿಸಿದರು.
"ಚುನಾವಣಾ ಪ್ರಜಾಪ್ರಭುತ್ವದ ಮೂಲಕ ಪ್ರತಿನಿಧಿಸಲು ಅಸಂಭವವಾಗಿರುವ ಸಾಮಾಜಿಕ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಸಾಂವಿಧಾನಿಕ ಪ್ರಕರಣಗಳಲ್ಲಿ ನ್ಯಾಯಾಲಯಗಳ ಮುಂದೆ ವ್ಯಾಪಕವಾಗಿ ಎಡತಾಕುತ್ತಾರೆ. ಆದರೆ, ನ್ಯಾಯಾಂಗ ಸಂಸ್ಥೆಗಳು ಅಂತಹ ಎಲ್ಲಾ ಪ್ರಕರಣಗಳನ್ನು ನಿರ್ವಹಿಸಲು ಖಂಡಿತವಾಗಿಯೂ ಉದ್ದೇಶಿಸಿಲ್ಲ ಅಥವಾ ಸಜ್ಜುಗೊಂಡಿಲ್ಲ" ಎಂದು ಅವರು ತಿಳಿಸಿದರು.
ಒಂದು ಕಡೆ ಒಪ್ಪಂದದ ವೈವಿಧ್ಯತೆ ಮತ್ತು ಮತ್ತೊಂದೆಡೆ ಮೂಲಭೂತ ತೊಡಗಿಸಿಕೊಳ್ಳುವಿಕೆಯ ನಿಯಮಗಳ ನಡುವೆ ಸೂಕ್ಷ್ಮ ಸಮತೋಲನವನ್ನು ಸಾಧಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
"ವೈವಿಧ್ಯಮಯ ಪ್ರಜಾಪ್ರಭುತ್ವಗಳಲ್ಲಿ, ಕೆಲವು ಅಭಿಪ್ರಾಯಗಳು ಬೃಹತ್ತಾಗಿರಬಹುದು, ಕೆಲವು ವಿಚಾರಗಳು ಹೆಚ್ಚು ವ್ಯಾಪಕವಾಗಿ ಸ್ವೀಕಾರಾರ್ಹವಾಗಿರಬಹುದು. ಆದರೆ, ಚರ್ಚೆಯು ಪ್ರಜಾಪ್ರಭುತ್ವವನ್ನು ಶಕ್ತಗೊಳಿಸುತ್ತದೆ ಮತ್ತು ಭಿನ್ನಾಭಿಪ್ರಾಯವು ಪೋಷಿಸುತ್ತದೆ" ಎಂದು ಅವರು ಗಮನಸೆಳೆದರು.
ಪ್ರಜಾಪ್ರಭುತ್ವವು ಗೊಂದಲಮಯ ಮತ್ತು ಅಪರಿಪೂರ್ಣವಾಗಿದೆ, ಆದರೆ ಅದರಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಿದ್ಧಾಂತಗಳಿವೆ ಎಂದು ಅವರು ಹೇಳಿದರು.
ಈ ತತ್ವಗಳನ್ನು ಎತ್ತಿಹಿಡಿಯದೆ ಆಯ್ಕೆಯಾದ ಅಧಿಕಾರಿಗಳ ಮತದಾನ ಮತ್ತು ಆಡಳಿತವನ್ನು ಅವಲಂಬಿಸುವುದು ಪ್ರಜಾಪ್ರಭುತ್ವದ ಪ್ರಯೋಗದ ಅಪೂರ್ಣ ಅಂಶವಾಗಿದೆ ಎಂದು ಅವರು ಹೇಳಿದರು.
"ಈ ಸಿದ್ಧಾಂತಗಳನ್ನು ಎರಡು ರೀತಿಯಲ್ಲಿ ಎತ್ತಿಹಿಡಿಯಲಾಗುತ್ತದೆ: ಮೊದಲನೆಯದು, ಪ್ರಜಾಪ್ರಭುತ್ವದ ಕಾರ್ಯಗಳನ್ನು ನಿರ್ವಹಿಸುವ ದೃಢವಾದ ಸಂಸ್ಥೆಗಳು, ಮತ್ತು ಎರಡನೆಯದಾಗಿ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪಕ್ಷಪಾತ ಮತ್ತು ಅನ್ಯಾಯವನ್ನು ತಡೆಗಟ್ಟುವ ಕಾರ್ಯವಿಧಾನದ ಖಾತರಿಗಳನ್ನು ಪರಿಚಯಿಸುವ ಮೂಲಕ" ಎಂದು ಅವರು ಪ್ರಜಾಪ್ರಭುತ್ವದ ರಕ್ಷಣೆ, ಪೋಷಣೆಯ ಹೊಳಹು ನೀಡಿದರು.