Delhi High Court
Delhi High Court 
ಸುದ್ದಿಗಳು

ಶಿಕ್ಷಣದ ಹಕ್ಕು, ತಾಯ್ತನದ ಹಕ್ಕುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಾಯಿಸುವಂತಿಲ್ಲ: ದೆಹಲಿ ಹೈಕೋರ್ಟ್

Bar & Bench

ಸ್ನಾತಕೋತ್ತರ ಪದವಿ ಓದುತ್ತಿರುವ ಗರ್ಭಿಣಿಯೊಬ್ಬರಿಗೆ ಹೆರಿಗೆ ರಜೆ ನೀಡುವಂತೆ ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಮೀರತ್‌ನಲ್ಲಿರುವ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲಯಕ್ಕೆ ನಿರ್ದೇಶನ ನೀಡಿದೆ [ರೇಣುಕಾ ಮತ್ತು ಯುಜಿಸಿ ನಡುವಣ ಪ್ರಕರಣ].

ಶಿಕ್ಷಣದ ಹಕ್ಕು ಮತ್ತು ಸಂತಾನೋತ್ಪತ್ತಿ ಸ್ವಾಯತ್ತತೆ ಹಕ್ಕುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಜನರನ್ನು ಒತ್ತಾಯಿಸುವಂತಿಲ್ಲ ಎಂದು ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಹೇಳಿದ್ದಾರೆ.

“ಪುರುಷ‌ ತನ್ನ ಉನ್ನತ ಶಿಕ್ಷಣ ಮುಂದುವರಿಸುತ್ತಲೇ ಪಿತೃತ್ವವನ್ನು ಚೆನ್ನಾಗಿ ಆನಂದಿಸಬಹುದಾಗಿದೆ. ಆದರೆ ಮಹಿಳೆ ಗರ್ಭಧಾರಣೆ ಪೂರ್ವ ಮತ್ತು ನಂತರದ ಆರೈಕೆಗೆ ಒಳಗಾಗಬೇಕಾಗುತ್ತದೆ. ಇದು ಆಕೆಯ ಆಯ್ಕೆಯಲ್ಲ ಬದಲಿಗೆ ಪ್ರಕೃತಿಯ ಇಚ್ಛೆಯಾಗಿದೆ. ಹಾಗಾಗಿ, ಮಗು ಹೆರುವ ಮಹಿಳೆ ಮೇಲೆ ಸಮಾಜ ಹೇರುವ ಪರಿಣಾಮದ ಕುರಿತಾಗಿ ಇತ್ಯರ್ಥಪಡಿಸುವುದು ನ್ಯಾಯಾಲಯದ ಮುಂದಿರುವ ವಿಚಾರವಾಗಿದೆ” ಎಂದು ನ್ಯಾಯಾಲಯ ಹೇಳಿತು.

ಮಾತೃತ್ವ ರಜೆಗಾಗಿ ನಿರ್ದಿಷ್ಟ ನಿಯಮಾವಳಿ ಇಲ್ಲದಿದ್ದರೂ ಎಂ.ಎಡ್‌ ಓದುತ್ತಿರುವ ಅರ್ಜಿದಾರೆ ಅದನ್ನು ಒದಗಿಸುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಜೊತೆಗೆ ಪದವಿ, ಮತ್ತು ಪದವಿ ಪೂರ್ವ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಹೆರಿಗೆ ರಜೆ ನೀಡಲು ನಿರ್ದಿಷ್ಟ ನಿಯಮಾವಳಿ ರೂಪಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ನಿರ್ದೇಶನ ನೀಡುವಂತೆ ಅವರು ಕೋರಿದ್ದರು.

ಇಂತಹ ಸನ್ನಿವೇಶದಲ್ಲಿ ಎರಡು ಮಾರ್ಗಗಳಿವೆ. ಒಂದು ಕೇವಲ ಪಠ್ಯಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಇಲ್ಲವೇ ಸಾಂವಿಧಾನಿಕ ಮೌಲ್ಯಗಳನ್ನು ಅನ್ವಯ ಮಾಡಿ ಸಮಾಜದ ಅಭಿವೃದ್ಧಿಗೆ ಪೂರಕವಾದ ಕಾನೂನಿಗೆ ಅವಕಾಶ ಕಲ್ಪಿಸುವುದಾಗಿದೆ. ಮೊದಲ ಮಾರ್ಗ ಮಹಿಳೆ ಉನ್ನತ ಶಿಕ್ಷಣದ ಹಕ್ಕು ಮತ್ತು ತಾಯಿಯಾಗುವ ಹಕ್ಕಿನ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತದೆ ಎಂದು ಅದು ನುಡಿಯಿತು.

ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಹೊಸದಾಗಿ ಪರಿಗಣಿಸಲು ಮತ್ತು ಅರ್ಜಿದಾರರು ಥಿಯರಿಗೆ ಸಂಬಂಧಿಸಿದ ತರಗತಿಗಳಲ್ಲಿ ಕನಿಷ್ಠ ಹಾಜರಾತಿ ಮಾನದಂಡ ಪೂರೈಸಿದ್ದರೆ ಅವರಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವಂತೆ ನ್ಯಾಯಾಲಯ ವಿವಿಗೆ ನಿರ್ದೇಶನ ನೀಡಿತು. ಅಲ್ಲದೆ ಅರ್ಜಿದಾರರು ಹಾಜರಾಗದ ಪ್ರಾಯೋಗಿಕ ತರಗತಿಗಳನ್ನು ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮರುವ್ಯವಸ್ಥೆ ಮಾಡಲು ಪೀಠ ಸೂಚಿಸಿತು.