Citizenship Amendment Act
Citizenship Amendment Act 
ಸುದ್ದಿಗಳು

ಸಿಎಎ ನಿಯಮಾವಳಿ ಅಧಿಸೂಚನೆ ಹೊರಡಿಸುವುದಾಗಿ ಘೋಷಿಸಿದ ಕೇಂದ್ರ; ಪೌರತ್ವ ತಿದ್ದುಪಡಿ ಕಾಯಿದೆ ಇಂದಿನಿಂದ ಜಾರಿಗೆ

Bar & Bench

ಇಂದು ರಾತ್ರಿ ಪೌರತ್ವ ತಿದ್ದುಪಡಿ ನಿಯಮಗಳ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೇಂದ ಸರ್ಕಾರ ಹೇಳಿದ್ದು, ವಿವಾದಾತ್ಮಕವಾದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) 2019 ಇಂದಿನಿಂದ ಜಾರಿಗೆ ಬರಲಿದೆ.

ರಾಷ್ಟ್ರಪತಿಗಳು 2019ರ ಡಿಸೆಂಬರ್‌ 12ರಂದು ಸಿಎಎಗೆ ಅಂಕಿತ ಹಾಕಿದ್ದರು. ಇದು 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಭಾರಿ ದಾಳಿಗೆ ಸಾಕ್ಷಿಯಾಗಿತ್ತು. ಆನಂತರ ಅದನ್ನು ಗೆಜಟ್‌ನಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಸಿಎಎ ನಿಯಮಗಳನ್ನು ರೂಪಿಸದ ಹಿನ್ನೆಲೆಯಲ್ಲಿ ಕಾಯಿದೆಯು ಕಳೆದ ನಾಲ್ಕು ವರ್ಷಗಳಿಂದ ಜಾರಿಗೆ ಬಂದಿರಲಿಲ್ಲ.

ಸಿಎಎ ನಿಯಮದ ಪ್ರಕಾರ 2014ರ ಡಿಸೆಂಬರ್‌ 31ರಂದು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂಗಳು, ಜೈನರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳಿಗೆ ಪೌರತ್ವ ದೊರೆಯಲಿದೆ. ಪೌರತ್ವ ಕಾಯಿದೆ 1955ರ ಸೆಕ್ಷನ್‌ 2ಕ್ಕೆ ತಿದ್ದುಪಡಿ ತಂದು ಅಕ್ರಮ ವಲಸಿಗರು ಎಂದು ಮಾಡಲಾಗಿದೆ.

ಇದಲ್ಲದೇ ಕಾಯಿದೆಗೆ ಸೆಕ್ಷನ್‌ 2(1)(ಬಿ) ಸೇರ್ಪಡೆಗೊಳಿಸಲಾಗಿದೆ. ಇದರ ಪ್ರಕಾರ ಕೇಂದ್ರ ಸರ್ಕಾರವು ಪಾಸ್‌ಪೋರ್ಟ್‌ (ಭಾರತಕ್ಕೆ ಪ್ರವೇಶ) ಕಾಯಿದೆ 1920 ಅಥವಾ ವಿದೇಶಿಯರ ಕಾಯಿದೆ 1946ರಲ್ಲಿ ಆಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು, ಜೈನರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳಿಗೆ ಅಕ್ರಮ ವಲಸಿಗರು ಎಂಬುದರಿಂದ ವಿನಾಯಿತಿ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಎ ಪ್ರಕಾರ ಅಂಥ ಪ್ರಜೆಗಳು ಪೌರತ್ವ ಕೋರಲು ಅರ್ಹರಾಗಿರುತ್ತಾರೆ. ಉದ್ದೇಶಪೂರ್ವಕವಾಗಿ ಸೆಕ್ಷನ್‌ 2(1)(ಬಿ)ಯಿಂದ ಮುಸ್ಲಿಮ್‌ ಸಮುದಾಯವನ್ನು ಹೊರಗಿಟ್ಟಿರುವುದಕ್ಕೆ ಭಾರಿ ಪ್ರತಿಭಟನೆಗಳು ನಡೆದಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳೂ ಸಲ್ಲಿಕೆಯಾಗಿವೆ.

ಧರ್ಮದ ಆಧಾರದಲ್ಲಿ ಸಿಎಎ ಮುಸ್ಲಿಮರ ವಿರುದ್ಧ ತಾರತಮ್ಯ ಪಾಲಿಸುತ್ತದೆ. ಇದಕ್ಕೆ ಸಕಾರಣ ನೀಡಲಾಗಿಲ್ಲ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. 2020ರ ಜನವರಿಯಲ್ಲಿ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 140 ಅರ್ಜಿದಾರರ ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಕೇಂದ್ರಕ್ಕೆ ನೋಟಿಸ್‌ ಜಾರಿ ಮಾಡಿತ್ತು. ಆದರೆ, ಕಾಯಿದೆಗೆ ತಡೆ ನೀಡಿರಲಿಲ್ಲ.

ಭಾರತ ಪ್ರಜೆಗಳ ಕಾನೂನಾತ್ಮಕ, ಪ್ರಜಾಸತ್ತೀಯ ಅಥವಾ ಜಾತ್ಯತೀತ ಹಕ್ಕುಗಳಿಗೆ ಸಿಎಎ ಯಾವುದೇ ಹಾನಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿತ್ತು. ಯಾವುದೇ ದೇಶ ಪ್ರಜೆಯು ಭಾರತದ ಪೌರತ್ವ ಪಡೆಯುವುದಕ್ಕೆ ಸಿಎಎ ಯಾವುದೇ ಸಮಸ್ಯೆ ಮಾಡುವುದಿಲ್ಲ. ಅದು ಹಾಗೆ ಉಳಿಯಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಉಳಿದಿವೆ.