Judge K M Radhakrishna 
ಸುದ್ದಿಗಳು

[ಲಂಚ ಪ್ರಕರಣದಲ್ಲಿ ದೇವೇಂದ್ರಪ್ಪ ಖುಲಾಸೆ] ಬಿ ಶ್ರೇಣಿ ಅಧಿಕಾರಿಯನ್ನು ಸರ್ಕಾರವೇ ವಜಾ ಮಾಡಬೇಕು: ವಿಶೇಷ ನ್ಯಾಯಾಲಯ

ಕಾನೂನಿನ ಅನ್ವಯ ತನಿಖಾ ಸಂಸ್ಥೆಯು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ದೇವೇಂದ್ರಪ್ಪ ಅವರ ವಿರುದ್ಧ ಮುಂದುವರಿಯಲು ಸ್ವಾತಂತ್ರ್ಯ ಕಲ್ಪಿಸಲಾಗಿದೆ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

Bar & Bench

“ಬಿ ಶ್ರೇಣಿಯ ಸರ್ಕಾರಿ ಸೇವೆಯಲ್ಲಿನ ಅಧಿಕಾರಿಯನ್ನು ಸರ್ಕಾರವೇ ತೆಗೆದುಹಾಕಬೇಕೆ ವಿನಾ ಸರ್ಕಾರಕ್ಕೆ ಅಧೀನವಾಗಿರುವ ಬಿಬಿಎಂಪಿ ಆಯುಕ್ತರು ವಜಾ ಮಾಡಲಾಗದು” ಎಂದು ಅಭಿಪ್ರಾಯಪಟ್ಟಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಲಂಚ ಪ್ರಕರಣದಲ್ಲಿನ ಆರೋಪಿ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ನಗರ ಯೋಜನೆಯ ಹಿಂದಿನ ಸಹಾಯಕ ನಿರ್ದೇಶಕ ಎಸ್‌ ಎನ್‌ ದೇವೇಂದ್ರಪ್ಪ ಅವರನ್ನು ಈಚೆಗೆ ಖುಲಾಸೆಗಳಿಸಿದೆ.

ತಮ್ಮ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ 7(ಎ) ಅಡಿ ದಾಖಲಾಗಿರುವ ಪ್ರಕರಣವನ್ನು ಕೈಬಿಡುವಂತೆ ಕೋರಿ ನಗರ ಯೋಜನೆ ವಿಭಾಗದ ಉಸ್ತುವಾರಿ ಸಹಾಯಕ ನಿರ್ದೇಶಕರಾದ ಎಸ್‌ ಎನ್‌ ದೇವೇಂದ್ರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಎಂ ರಾಧಾಕೃಷ್ಣ ಅವರು ಪುರಸ್ಕರಿಸಿದ್ದಾರೆ.

“ಭ್ರಷ್ಟಾಚಾರ ನಿಷೇಧ (ತಿದ್ದುಪಡಿ) ಕಾಯಿದೆ ಸೆಕ್ಷನ್‌ 19ರ ಅಡಿ 2023ರ ಮಾರ್ಚ್‌ 14ರಂದು ದೇವೇಂದ್ರಪ್ಪ ಅವರು ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನದ 7(ಎ) ಅಡಿ ಕೈಬಿಡುವಂತೆ ಕೋರಿರುವ ಅರ್ಜಿಯನ್ನು ಮಾನ್ಯ ಮಾಡಲಾಗಿದೆ. ಕಾನೂನಿನ ಅನ್ವಯ ತನಿಖಾ ಸಂಸ್ಥೆಯು ಸಕ್ಷಮ ಪ್ರಾಧಿಕಾರರಿಂದ ಅನುಮತಿ ಪಡೆದು ದೇವೇಂದ್ರಪ್ಪ ಅವರ ವಿರುದ್ಧ ಮುಂದುವರಿಯಲು ಸ್ವಾತಂತ್ರ್ಯ ಕಲ್ಪಿಸಲಾಗಿದೆ” ಎಂದು ಹೇಳುವ ಮೂಲಕ ಪುನರ್‌ ತನಿಖೆಯ ಆಯ್ಕೆಯನ್ನು ನ್ಯಾಯಾಲಯ ಮುಕ್ತವಾಗಿರಿಸಿದೆ.

“ನೇಮಕಾತಿ ಪ್ರಾಧಿಕಾರಕ್ಕಿಂತ ಕೆಳಗಿರುವ ಪ್ರಾಧಿಕಾರವು ಬಿ ಶ್ರೇಣಿಯ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಲಾಗದು ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಒಪ್ಪಬೇಕಿದೆ. ಹಾಲಿ ಆರೋಪಿಗೆ ಸಂಬಂಧಿಸಿದ ಪ್ರಕರಣದಲ್ಲಿ ನೇಮಕ ಅಥವಾ ವಜಾ ಮಾಡುವ ವಿಚಾರದಲ್ಲಿ ಬಿಬಿಎಂಪಿ ಆಯುಕ್ತರಿಗಿಂತ ಸರ್ಕಾರ ಸೂಕ್ತವಾಗಿದೆ. ಪ್ರಾಸಿಕ್ಯೂಷನ್‌ಗೆ ಬಿಬಿಎಂಪಿ ಆಯುಕ್ತರು ನೀಡಿರುವ ಆದೇಶವು ಸೂಕ್ತವಲ್ಲ. ಈ ಅನುಮತಿ ನೀಡಲು ಬಿಬಿಎಂಪಿ ಆಯುಕ್ತರು ಸಮರ್ಥರಲ್ಲ. ಈ ನೆಲೆಯಲ್ಲಿ ಸರ್ಕಾರಿ ಅಭಿಯೋಜಕರ ವಾದದಲ್ಲಿ ಬಲವಿಲ್ಲ” ಎಂದು ನ್ಯಾಯಾಲಯ ವಿವರಿಸಿದೆ.

ಮುಂದುವರಿದು, “ಇದರರ್ಥ ಪ್ರಕರಣದ ಊರ್ಜಿತವಲ್ಲ ಎಂದು ಭಾವಿಸಬೇಕಿಲ್ಲ. ಸಕ್ಷಮ ಪ್ರಾಧಿಕಾರದಿಂದ ತನಿಖಾ ಸಂಸ್ಥೆಯು ಅನುಮತಿ ಪಡೆದು ಆರೋಪಿ ದೇವೇಂದ್ರಪ್ಪ ಅವರ ವಿರುದ್ಧ ಅಭಿಯೋಜನಾ ಪ್ರಕ್ರಿಯೆ ಮುಂದುವರಿಸಬಹುದಾಗಿದೆ” ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ: ಕಟ್ಟಡವೊಂದರ ಸ್ವಾಧೀನತಾ ಪ್ರಮಾಣ ಪತ್ರ ನೀಡಲು ದೇವೇಂದ್ರಪ್ಪ ಅವರು 40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ಭಾಗವಾಗಿ 20 ಲಕ್ಷ ಪಡೆಯುತ್ತಿದ್ದಾಗ 2021ರ ಫೆಬ್ರವರಿ 5ರಂದು ಭ್ರಷ್ಟಾಚಾರ ನಿಗ್ರಹ ದಳದ ಟ್ರ್ಯಾಪ್‌ಗೆ ಬಿದ್ದಿದ್ದರು. ಆನಂತರ ದೇವೇಂದ್ರಪ್ಪ ಅವರ ಮನೆಯಲ್ಲಿ ಶೋಧ ನಡೆಸಿದ್ದಾಗ ಹಲವು ದಾಖಲೆಗಳು, ವಿವಿಧ ಅಧಿಕಾರಿಗಳ ಮೊಹರುಗಳು ಹಾಗೂ ದುಬಾರಿ ಬೆಲೆಯ ಮದ್ಯದ ಬಾಟಲಿಗಳು ದೊರೆತಿದ್ದವು.

ತನಿಖೆ ಪೂರ್ಣಗೊಳಿಸಿದ್ದ ಎಸಿಬಿ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಆರೋಪ ಪಟ್ಟಿ ಸಲ್ಲಿಸಲು ಅನುಮತಿಸಿದ್ದರು. ಇದನ್ನು ಪ್ರಶ್ನಿಸಿ ಹಾಗೂ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ದೇವೇಂದ್ರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ.

Karnataka Lokayukta Vs S N Devendrappa.pdf
Preview